ಹಾವೇರಿ: ಸೋಂಕಿನ ಲಕ್ಷಣ ಕಂಡು ಬಂದ ಆರಂಭಿಕ ಹಂತದಲ್ಲಿಯೇ ತಪಾಸಣೆ, ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸೆ ಅವಶ್ಯವಾಗಿದೆ. ಇದರಿಂದ ಕೋವಿಡ್ ಸೋಂಕಿನ ಪ್ರಮಾಣ ಹಾಗೂ ಮರಣ ಪ್ರಮಾಣ ಇಳಿಮುಖಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ತಂಡವಾಗಿ ತಪಾಸಣೆ, ಸಂರ್ಪತರ ಪತ್ತೆ ಕಾರ್ಯವನ್ನು ಚುರುಕುಗೊಳಿಸಿ ತ್ವರಿತ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಪಾಸಿಟಿವ್ ಕಂಡುಬಂದ ತಕ್ಷಣವೇ ಆ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಸಂರ್ಪತರನ್ನು 24 ತಾಸಿನಲ್ಲಿ ಪತ್ತೆಮಾಡಿ ಪರೀಕ್ಷೆಗೊಳಪಡಿಸಬೇಕು ಎಂದರು.
ಸಂರ್ಪತರ ಆರ್ಟಿಪಿಆರ್ ಲ್ಯಾಬ್ ವರದಿ ವಿಳಂಬವಾಗಬಾರದು. 3ದಿನದೊಳಗಾಗಿ ಪರೀಕ್ಷೆ ವರದಿ ಲಭ್ಯವಾಗಬೇಕು. ಇದರಿಂದ ಪಾಸಿಟಿವ್ ವ್ಯಕ್ತಿಗಳಿಗೆ ಚಿಕಿತ್ಸೆ ಹಾಗೂ ಸಂರ್ಪತರ ತ್ವರಿತ ಪತ್ತೆಗೆ ಅನುಕೂಲವಾಗಲಿದೆ. ವಿಳಂಬವಾದಷ್ಟು ವೈರಾಣು ಉಲ್ಬಣಗೊಂಡು ರೋಗಿಗಳ ಸ್ಥಿತಿ ಗಂಭೀರವಾಗಲಿದೆ. ಈ ರೀತಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದರು.
ಫೀವರ್ ಕ್ಲಿನಿಕ್ನ ತಪಾಸಣೆ, ಲ್ಯಾಬ್ ವರದಿ, ಪ್ರತಿದಿನ ತಪಾಸಣೆ ಪ್ರಗತಿ ಕುರಿತು ತಾಲೂಕಾವಾರು ಟೀಮ್ಳನ್ನು ರಚಿಸಿಕೊಂಡು ಕಾರ್ಯನಿರ್ವಹಿಸಬೇಕು. ವಾಟ್ಸ್ಆಪ್ ಗ್ರೂಪ್ ರಚಿಸಿಕೊಂಡು ವರದಿ ಹಂಚಿಕೊಳ್ಳಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ತಾಪಂ ಇಒ ನೇತೃತ್ವದಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮುಖ್ಯಾಧಿಕಾರಿಗಳು ಪೌರಾಯುಕ್ತರ ನೇತೃತ್ವದಲ್ಲಿ ಕರೊನಾ ಸೋಂಕಿತರ ಹಾಗೂ ಅವರ ಸಂಪರ್ಕ ಪತ್ತೆ ಕಾರ್ಯವನ್ನು ಚುರುಕುಗೊಳಿಸಬೇಕು. ಈ ಉದ್ದೇಶಕ್ಕಾಗಿ ತಾಲೂಕುವಾರು ತಂಡಗಳನ್ನು ರಚಿಸಿಕೊಂಡು ತ್ವರಿತವಾಗಿ ಕಾರ್ಯಾಚರಣೆ ಮಾಡಬೇಕು. ಅಪರ ಜಿಲ್ಲಾಧಿಕಾರಿ, ಗ್ರಾಮೀಣ ಸಂಪರ್ಕ ಪತ್ತೆ ಹಾಗೂ ತಪಾಸಣೆಯ ಉಸ್ತುವಾರಿ ವಹಿಸಬೇಕು. ತಹಸೀಲ್ದಾರರು ತಾಲೂಕು ಮಟ್ಟದ, ಗ್ರಾಮೀಣ ಮತ್ತು ನಗರದ ಉಸ್ತುವಾರಿಯನ್ನು ವಹಿಸಬೇಕು. ಪಾಸಿಟಿವ್ ಬಂದ ವ್ಯಕ್ತಿಗಳ ಪೈಕಿ ಯಾರು ಸಂಪರ್ಕದ ವಿವರವನ್ನು ನೀಡುವುದಿಲ್ಲವೋ ಅಥವಾ ಅರೆಬರೆ ವಿವರ ನೀಡುವವರ ಹಿನ್ನೆಲೆ, ಕುಟುಂಬದ ವಿವರವನ್ನು ಪತ್ತೆ ಮಾಡಬೇಕು. ಇದಕ್ಕಾಗಿ ಪ್ರತ್ಯೇಕ ಸಂಪರ್ಕ ಡೆಸ್ಕ್ ಸ್ಥಾಪಿಸಬೇಕು. ಉಸಿರಾಟದ ಸಮಸ್ಯೆ ಇರುವವರಿಗೆ ಮಾತ್ರ ಆಕ್ಸಿಜನ್ ಬೆಡ್ ವ್ಯವಸ್ಥೆ ಕಲ್ಪಿಸಬೇಕು. ಕೋವಿಡ್ ಸೌಮ್ಯ ಲಕ್ಷಣ ಹೊಂದಿದವರಿಗೆ ಕೋವಿಡ್ ಕೇರ್ ಸೆಂಟರ್ಗಳಲ್ಲಿ ವ್ಯವಸ್ಥೆ ಮಾಡಬೇಕು ಎಂದು ಡಿಎಚ್ಒಗೆ ಸೂಚಿಸಿದರು.
ಜಿಲ್ಲೆಯಲ್ಲಿ 148 ಜನ ಕೋವಿಡ್ನಿಂದ ಮರಣ ಹೊಂದಿದ್ದಾರೆ. ಶೇ. 1.18ರಷ್ಟು ಮರಣ ಪ್ರಮಾಣವಿದೆ. ವಿಳಂಬವಾಗಿ ಆಸ್ಪತ್ರೆಗೆ ದಾಖಲು ಸೇರಿದಂತೆ ಮರಣದ ಕಾರಣಗಳ ಕುರಿತು ವಿಶ್ಲೇಷಣಾ ವರದಿಯೊಂದನ್ನು ನೀಡುವಂತೆ ಉಪವಿಭಾಗಾಧಿಕಾರಿ ಡಾ. ದಿಲೀಪ್ ಶಶಿ ಅವರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಡಿಎಚ್ಒ ಡಾ. ರಾಜೇಂದ್ರ ದೊಡ್ಡಮನಿ, ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಭಾವನಮೂರ್ತಿ ಇತರರಿದ್ದರು.