ಜಿಲ್ಲೆ

ಕೋವಿಡ್ ನಿಯಂತ್ರಣಕ್ಕೆ ತಪಾಸಣೆ ತೀವ್ರಗೊಳಿಸಿ

ಧಾರವಾಡ: ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿಗಳಂತೆ ವಿವಿಧ ಜನವರ್ಗಗಳನ್ನು ರ್ಯಾಂಡಮ್ ತಪಾಸಣೆಗೆ ಒಳಪಡಿಸಬೇಕು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆದ್ಯತಾನುಸಾರ ತಪಾಸಣೆಗೆ ಜನರನ್ನು ಆಯ್ಕೆ ಮಾಡಬೇಕು. ಪ್ರತಿದಿನ ಪ್ರಯೋಗಾಲಯದ ಸಂಪೂರ್ಣ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚು ತಪಾಸಣೆಗಳನ್ನು ತ್ವರಿತವಾಗಿ ನಡೆಸಬೇಕು. ಪರಸ್ಪರ ಅಂತರ, ಮಾಸ್ಕ್ ಧರಿಸುವಿಕೆ ಕುರಿತು ಜನಜಾಗೃತಿ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳಬೇಕು ಎಂದು ಬೃಹತ್, ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಇದುವರೆಗೆ 24,348 ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ 23,607 ಜನರ ವರದಿ ನೆಗೆಟಿವ್ ಬಂದಿದೆ. 311 ಜನರ ವರದಿ ಪಾಸಿಟಿವ್ ಬಂದಿದೆ. ಪ್ರತಿದಿನ ಸರಾಸರಿ 250 ಜನರು ತಪಾಸಣೆಗೊಳಪಡುತ್ತಿದ್ದಾರೆ. ಅವಳಿನಗರದ ಸೀಲ್​ಡೌನ್ ಪ್ರದೇಶಗಳಲ್ಲಿ ನಿಯಮಗಳ ಪ್ರಕಾರ ಸೋಂಕು ಲಕ್ಷಣಗಳಿರುವ ಜನರನ್ನು ತಪಾಸಣೆಗೆ ಒಳಪಡಿಸಬೇಕು. ಮಾಸ್ಕ್ ಧರಿಸದಿರುವವರಿಗೆ ದಂಡ ವಿಧಿಸುವ ಕಾರ್ಯ ಚುರುಗೊಳಿಸಬೇಕು. ದಂಡ ವಿಧಿಸಿದ ನಂತರ ಅವರು ಮಾಸ್ಕ್ ಧರಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಕುರಿತು ಜನಜಾಗೃತಿ ಕಾರ್ಯ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ತೀವ್ರ ಉಸಿರಾಟದ ತೊಂದರೆ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳಿರುವ ರೋಗಿಗಳು ನೆರೆಯ ಜಿಲ್ಲೆಗಳಿಂದ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಐಎಲ್​ಐ ಲಕ್ಷಣ ಇರುವವರನ್ನು ಗುರುತಿಸಿ ತಪಾಸಣೆಗೊಳಪಡಿಸಲಾಗುತ್ತಿದೆ ಎಂದರು. ಶಾಸಕರಾದ ಸಿ.ಎಂ. ನಿಂಬಣ್ಣವರ, ಅಮೃತ ದೇಸಾಯಿ, ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಪೊಲೀಸ್ ಆಯುಕ್ತ ಆರ್. ದಿಲೀಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಇತರರಿದ್ದರು.