ಮರಿದೇವ ಹೂಗಾರ ಹುಬ್ಬಳ್ಳಿ
ಕರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದ್ದ ವೇಳೆ ಜಿಲ್ಲಾಡಳಿತ ‘ಕೋವಿಡ್ ಕೇರ್ ಸೆಂಟರ್’ಗಳನ್ನು ಗುರುತಿಸಿ ಲಕ್ಷಣ ರಹಿತ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೂಚಿಸಿತ್ತು. ಈಗ ಇವೆಲ್ಲವುಗಳ ಬಾಗಿಲುಗಳನ್ನು ಬಂದ್ ಮಾಡಲಾಗಿದ್ದು, ನಿಗದಿತ ಮೂರು ಆಸ್ಪತ್ರೆಗಳಲ್ಲಿ ಮಾತ್ರ ಕೋವಿಡ್ ಚಿಕಿತ್ಸೆ ಮುಂದುವರಿದಿದೆ.
ಕರೊನಾ ಸೋಂಕು ಇಳಿಮುಖ ಹಿನ್ನೆಲೆಯಲ್ಲಿ ಪಕ್ಕದ ಹಾವೇರಿ ಜಿಲ್ಲೆ ‘ಹಸಿರು ವಲಯ’ ಕಾರ್ಡ್ ಪಡೆಯಲು ಸನ್ನದ್ಧವಾಗಿದೆ. ಕಳೆದೆರಡು ತಿಂಗಳುಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಕರೊನಾ ಸಂಖ್ಯೆ ಎರಡಂಕಿ ದಾಟಿಲ್ಲ. ಹೀಗಾಗಿ, ಸರ್ಕಾರ ಕೋವಿಡ್ ಕೇರ್ ಸೆಂಟರ್ಗಳನ್ನು ಮುಚ್ಚಲಾಗಿದೆ. ಕರೊನಾ ಸೋಂಕು ಇಳಿಮುಖವಾಗಿದ್ದರೂ ಈ ಹಿಂದಿನ ಕಠಿಣ ಮಾರ್ಗಸೂಚಿಗಳನ್ನೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದುವರಿಸುವ ಮೂಲಕ ವಿರೋಧಾಭಾಸದ ನಿಲುವು ತೋರಿಸುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಕೇಳಿಬರುತ್ತಿದೆ. ಧಾರವಾಡ ಜಿಲ್ಲೆಯ 15 ಕೋವಿಡ್ ಕೇರ್ ಸೆಂಟರ್, ರೈಲ್ವೆ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಇಎಸ್ಐ, ಕಿಮ್್ಸ, ಎಸ್ಡಿಎಂಸಿ ಹಾಗೂ 18 ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನಿಗದಿತ 15 ಕೋವಿಡ್ ಸೆಂಟರ್ಗಳಲ್ಲಿ 1281 ಬೆಡ್ಗಳ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಯೇ ಹೆಚ್ಚುವರಿ ಬೆಡ್ಗಳನ್ನು ಹಾಕಿಸಿ ಒಟ್ಟು 2951 ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. ಅವರೆಲ್ಲ ಸೋಂಕು ಮುಕ್ತರಾಗಿ ಮನೆಗೆ ಮರಳಿದ್ದಾರೆ.
ಇಳಿಮುಖ: ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಒಂದು ಪ್ರಕರಣದಿಂದ ಆರಂಭವಾಗಿ ನಂತರ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತ ಸಾಗಿತ್ತು. ಜುಲೈ ತಿಂಗಳಲ್ಲಿ 4,321, ಆಗಸ್ಟ್ ನಲ್ಲಿ 7,182, ಸೆಪ್ಟೆಂಬರ್ನಲ್ಲಿ 5,835 ಕರೊನಾ ಸೋಂಕಿತರು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಕ್ಟೋಬರ್ನಲ್ಲಿ 3025, ನವೆಂಬರ್ನಲ್ಲಿ 613, ಡಿಸೆಂಬರ್ನಲ್ಲಿ 440 ಕೋವಿಡ್ ಸೋಂಕಿತರು ದಾಖಲಾಗಿದ್ದರು. ಈಗ ಈ ಪ್ರಮಾಣ ಸಾಕಷ್ಟು ಇಳಿಕೆ ಕಂಡಿದೆ. ಇದನ್ನು ಅರಿತಿರುವ ಜಿಲ್ಲಾಡಳಿತ ಕೋವಿಡ್ ಕೇರ್ ಸೆಂಟರ್ಗಳನ್ನು ಬಂದ್ ಮಾಡಿಸಿದೆ.
ಕೋವಿಡ್ ಕೇರ್ ಸೆಂಟರ್ ಬಂದ್ ಮಾಡಲಾಗಿದೆ. ಜಿಲ್ಲಾಡಳಿತ ನಿಗದಿಪಡಿಸಿದ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಮುಂದುವರಿದಿದೆ. ಸೋಂಕಿತರ ಸಂಖ್ಯೆ ಇಳಿಮುಖವಾಗಿರುವುದು ಇದಕ್ಕೆ ಕಾರಣ. | ಡಾ. ಯಶವಂತ ಮದೀನಕರ ಡಿಎಚ್ಒ
ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬಳಸಿದ ವಸ್ತುಗಳು: ಕೋವಿಡ್ ಸೋಂಕಿತರಿಗೆ ಊಟಕ್ಕೆಂದು ಪ್ಲಾಸ್ಟಿಕ್ ತಟ್ಟೆ, ಬೆಡ್, ಬೆಡ್ ಶೀಟ್, ಕುಡಿಯುವ ನೀರಿನ ಬಾಟಲ್ಗಳನ್ನು ನೀಡಲಾಗಿತ್ತು. ಅವೆಲ್ಲವುಗಳನ್ನು ಜೈವಿಕ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಿತ್ಯ ರವಾನೆ ಮಾಡಲಾಗಿದೆ. ಇದಕ್ಕಾಗಿಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಂಡವೊಂದನ್ನು ರಚಿಸಿದ್ದರು. ‘ಕೋವಿಡ್ ವೇಸ್ಟ್’ ಎಂದು ಪರಿಗಣಿಸಿ ಅವುಗಳನ್ನು ತಾರಿಹಾಳಕ್ಕೆ ಸಾಗಿಸಲಾಗಿದೆ.