ಜಿಲ್ಲೆ

ಕೋವಿಡ್-19 ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಿ

ಗದಗ: ಕೋವಿಡ್-19 ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಜಿಲ್ಲೆಯಲ್ಲಿ ಗಂಟಲ ದ್ರವ ಮಾದರಿ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ಕುರಿತು ಮಂಗಳವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಪ್ರತಿಬಂಧಕ ಪ್ರದೇಶಗಳಲ್ಲಿನ ನಿವಾಸಿ ಗಳಿಗೆ ಅವಶ್ಯಕ ಸಾಮಗ್ರಿಗಳನ್ನು ಸಕಾಲಿಕವಾಗಿ ಪೂರೈಸುವುದು, ಇನ್ಸಿಡೆಂಟ್ ಕಮಾಂಡರ್​ಗಳ ಜವಾಬ್ದಾರಿಯಾಗಿದ್ದು ಅವರು ನಿತ್ಯವೂ ಈ ಕುರಿತು ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್-19 ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಶಂಕಿತ ಮತ್ತು ಸೋಂಕಿತ ಪ್ರಕರಣಗಳ ವರದಿ ಬಹು ಮುಖ್ಯವಾಗಿದ್ದು, ಇದರ ಜತೆಗೆ ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂರ್ಪತರನ್ನು ನಿಗದಿತ ಅವಧಿಯಲ್ಲಿ ಪತ್ತೆ ಹಚ್ಚಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ., ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಿಡದ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಜಗದೀಶ ನಿಡಗುಂದಿ ಇತರರು ಇದ್ದರು.

ಮಂಗಳವಾರ ಎರಡು ಕೋವಿಡ್ ಪ್ರಕರಣ ಪತ್ತೆ

ಗದಗ: ಜಿಲ್ಲೆಯಲ್ಲಿ ಮಂಗಳವಾರ ಎರಡು ಕೋವಿಡ್-19 ಕೇಸ್​ಗಳು ಪತ್ತೆಯಾಗಿವೆ. ಮೈಸೂರು ಜಿಲ್ಲೆಯಿಂದ ಜಿಲ್ಲೆಗೆ ಆಗಮಿಸಿದ್ದ ಮುಂಡರಗಿ ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದ ನಿವಾಸಿ 30 ವರ್ಷದ ಪುರುಷ ಹಾಗೂ ಗದಗ ಮುಳಗುಂದ ನಾಕಾ ವ್ಯಾಪ್ತಿಯ (ಪಿ 9405) ಸಂಪರ್ಕದಿಂದ ಅದೇ ಪ್ರದೇಶದ 24 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ್​ಬಾಬು ತಿಳಿಸಿದ್ದಾರೆ. ಸದ್ಯ ಸೋಂಕಿತರನ್ನು ನಗರದ ಜಿಮ್್ಸ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 176 ಜನರಿಗೆ ಸೋಂಕು ತಗುಲಿದ್ದು, ಇದರಲ್ಲಿ ಮೂವರು ಮೃತಪಟ್ಟಿದ್ದಾರೆ. 53 ಜನ ಗುಣವಾಗಿದ್ದು, 120 ಸಕ್ರಿಯ ಕೇಸ್​ಗಳಿವೆ.

ಸಾಮಾನ್ಯ ಸ್ಥಿತಿಗೆ 8 ಕಂಟೇನ್ಮೆಂಟ್ ಪ್ರದೇಶ

ಗದಗ: ಕರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟ ನಂತರ ಕಂಟೇನ್ಮೆಂಟ್ ಪ್ರದೇಶ ಎಂದು ಘೋಷಿಸಲಾಗಿದ್ದ ಎಂಟು ಪ್ರದೇಶಗಳ ಆದೇಶವನ್ನು ಹಿಂಪಡೆಯಲಾಗಿದೆ. ನಗರದ ಹುಡ್ಕೋ ಕಾಲನಿ 2ನೇ ಕ್ರಾಸ್, ಅಂಬಾಭವಾನಿ ಗುಡಿ ಹತ್ತಿರದ ಪ್ರದೇಶ, ಗದಗ ತಾಲೂಕಿನ ಲಕ್ಕುಂಡಿ ವಾರ್ಡ್ ನಂ. 8 ಮತ್ತು 11, ಗದಗ ನಗರದ ಪಂಚಾಕ್ಷರಿ ನಗರ, ನಗರದ ಕಳಸಾಪೂರ ರಸ್ತೆಯ ಸೇವಾಲಾಲ ನಗರ, ರೋಣ ತಾಲೂಕು ಹೊಳೆಆಲೂರಿನ ಕಂಟೇನ್ಮೆಂಟ್ ಪ್ರದೇಶಗಳನ್ನು ಸಾಮಾನ್ಯ ವಲಯವಾಗಿ ಬದಲಾಯಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಬಸ್ ಚಾಲಕನಿಗೆ ಕರೊನಾ ಸೋಂಕು

ಮುಂಡರಗಿ: ಮೈಸೂರಿನ ಕೆಎಸ್​ಆರ್​ಟಿಸಿ ಡಿಪೋ ದಲ್ಲಿ ಬಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದ 30 ವರ್ಷದ ವ್ಯಕ್ತಿಗೆ ಕರೊನಾ ಸೋಂಕು ದೃಢಪಟ್ಟಿದೆ. ಆರೋಗ್ಯ ಇಲಾಖೆ ಮತ್ತು ಕೊರ್ಲಹಳ್ಳಿ ಗ್ರಾ.ಪಂ.ನಿಂದ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.

ಚಾಲಕನಿಗೆ ಮೈಸೂರಿನಲ್ಲಿ ಗಂಟಲ ದ್ರವ ಪರೀಕ್ಷೆ ಮಾಡಲಾಗಿತ್ತು. ಆದರೆ, ವರದಿ ಬರುವ ಮೊದಲೇ ಜೂ.27ರಂದು ಅವರ ಸ್ವಗ್ರಾಮ ಬೆಣ್ಣಿಹಳ್ಳಿಗೆ ಆಗಮಿಸಿದ್ದರು. ಜೂ. 29ರಂದು ಕರೊನಾ ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟ ತಕ್ಷಣ ಮೈಸೂರಿನಿಂದ ಗದಗ ಜಿಲ್ಲಾಸ್ಪತ್ರೆಗೆ ಮಾಹಿತಿ ನೀಡಲಾಗಿದೆ. ಜೂ.29ರಂದು ರಾತ್ರಿ 12ಗಂಟೆ ಸುಮಾರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಗ್ರಾಮಕ್ಕೆ ತೆರಳಿ ಕರೊನಾ ಸೋಂಕಿತ ವ್ಯಕ್ತಿಯನ್ನು ಗದಗ ಕೋವಿಡ್-19 ಆಸ್ಪತ್ರೆಗೆ ರವಾನಿಸಿದ್ದಾರೆ.

ಸೋಂಕಿತನ ಸಂಪರ್ಕದಲ್ಲಿದ್ದ ಗ್ರಾಮದ 12 ಜನರನ್ನು ಮಂಗಳವಾರ ಪಟ್ಟಣದ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಗ್ರಾ.ಪಂ, ಆರೋಗ್ಯ ಇಲಾಖೆಯಿಂದ ಗ್ರಾಮದಲ್ಲಿ ಸ್ಯಾನಿಟೈಸ್ ಮಾಡಲಾಗಿದೆ. ಸೋಂಕಿತ ವ್ಯಕ್ತಿಯು ವಾಸವಿದ್ದ ಗ್ರಾಮದ ರಸ್ತೆಗಳಿಗೆ ಮುಳ್ಳುಬೇಲಿ ಹಾಕಿ ಸಂಚಾರ ಬಂದ್ ಮಾಡಲಾಗಿದೆ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಬಸವರಾಜ ಕೆ. ತಿಳಿಸಿದರು.

ನಿಯಮ ಉಲ್ಲಂಘಿಸಿದವರ ಮೇಲೆ ಕೇಸ್

ಗದಗ: ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ನೀಡಿರುವ ನಿರ್ದೇಶನಗಳನ್ನು ಉಲ್ಲಂಘಿಸಿದ ಗದಗ-ಬೆಟಗೇರಿ ವ್ಯಾಪ್ತಿಯ ಸಂಘ, ಸಂಸ್ಥೆ, ಹೋಟೆಲ್​ಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ತಿಳಿಸಿದ್ದಾರೆ.

ಬೆಟಗೇರಿ ಎಸ್.ಎಸ್.ಕೆ. ವ್ಯಾಯಾಮ ಶಾಲೆ, ಅಕ್ಕಿಸ್ ಫಿಟ್ನೆಸ್ ಜಿಮ್ ನಿಸರ್ಗ ಬಡಾವಣೆ ಖಾನ್ ಜಿಮ್ ಧನುಷ ಹೋಟೆಲ್, ಕಳಸಾಪೂರ ರಸ್ತೆಯ ಇಕ್ವಿನಾಕ್ಸ್ ಜಿಮ್ ಗದಗ ಶಹರದ ನ್ಯೂ ಆನಂದ ಮಾಂಸಾಹಾರಿ ಹೋಟೆಲ್​ಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಲಕ್ಷೆ್ಮೕಶ್ವರದ ಬಾಲೇಹೊಸೂರ ಗ್ರಾಮದ ಘಂಟಿಚೋರ್ ಸಮಾಜದವರು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಸಮಯದಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ನಿಯಮ ಪಾಲನೆಯಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದರು. ಜಿಲ್ಲೆಯ ಸಾರ್ವಜನಿಕರು ಸರ್ಕಾರದ ನಿರ್ದೇಶನಗಳನ್ನು ಪಾಲಿಸಲು ವಿಫಲವಾದಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.