ಧಾರವಾಡ: ಕೋವಿಡ್ 19 ತಪಾಸಣೆಗೆ ನಗರದಲ್ಲಿ ಲಭ್ಯ ಉನ್ನತ ಸಂಪನ್ಮೂಲ ಬಳಸಿ ಇನ್ನಷ್ಟು ಪ್ರಯೋಗಾಲಯ ತಪಾಸಣೆ ಕೇಂದ್ರ ಸ್ಥಾಪಿಸಲು ಪ್ರಯತ್ನಿಸಲಾಗುವುದು. ಕವಿವಿ ಸೂಕ್ಷ್ಮಾಣುಜೀವಿಶಾಸ್ತ್ರ, ಜೈವಿಕ ತಂತ್ರಜ್ಞಾನ, ರಸಾಯನಶಾಸ್ತ್ರ ಮತ್ತು ಅಪರಾಧಶಾಸ್ತ್ರ ವಿಭಾಗಗಳ ಪ್ರಯೋಗಾಲಯ ಉಪಕರಣಗಳು ಹಾಗೂ ಡಿಎನ್ಎ ಕೇಂದ್ರದ ಸಹಕಾರದೊಂದಿಗೆ ನುರಿತ ಮಾನವ ಸಂಪನ್ಮೂಲ ಹಾಗೂ ಆರ್ಎನ್ಎ ಯಂತ್ರಗಳನ್ನು ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಭಾನುವಾರ ಸಂಜೆ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಹುಬ್ಬಳ್ಳಿಯ ಕಿಮ್್ಸ ಪ್ರಯೋಗಾಲಯಕ್ಕೆ ಈಗಾಗಲೇ ಐಸಿಎಂಆರ್ ಅನುಮತಿ ದೊರೆತು ಕಾರ್ಯ ಪ್ರಾರಂಭವಾಗಿದೆ. ಸುತ್ತ್ತನ ಜಿಲ್ಲೆಗಳಿಂದ ಪ್ರತಿದಿನ ಕೋವಿಡ್ ಪರೀಕ್ಷೆಗೆ ಅಧಿಕ ಗಂಟಲ ದ್ರವದ ಮಾದರಿಗಳು ಬರುತ್ತಿವೆ. ಮುಂಬರುವ ದಿನಗಳ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಮುಂಜಾಗ್ರತೆ ಕ್ರಮವಾಗಿ ಇನ್ನಷ್ಟು ಪ್ರಯೋಗಾಲಯಗಳ ಸ್ಥಾಪನೆ ಅಥವಾ ಸದ್ಯ ಇರುವ ಪ್ರಯೋಗಾಲಯದ ಪರೀಕ್ಷೆ ಸಾಮರ್ಥ್ಯ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ನಗರದಲ್ಲಿರುವ ಕರ್ನಾಟಕ ವಿವಿ, ಕೃಷಿ ವಿವಿ, ಡಿಮ್ಹಾನ್ಸ್, ಡಿಎನ್ಎ ಕೇಂದ್ರದಲ್ಲಿರುವ ಉನ್ನತ ಗುಣಮಟ್ಟದ ಪ್ರಯೋಗಾಲಯ ಸಾಮಗ್ರಿಗಳು ಹಾಗೂ ಅರ್ಹ ತಜ್ಞ ಸಂಪನ್ಮೂಲ ಬಳಸಿಕೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದ ಸಂಸ್ಥೆಗಳ ಸಹಕಾರ ಕೋರಲಾಗುವುದು ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪೊ›. ಟಿ.ಎಂ. ಭಾಸ್ಕರ್ ಮಾತನಾಡಿ, ಪ್ರಯೋಗಾಲಯ ಉಪಕರಣಗಳು, ತಜ್ಞ ಮಾನವ ಸಂಪನ್ಮೂಲ ಸೇರಿ ವಿವಿಯಿಂದ ಎಲ್ಲ ಸಹಕಾರ ನೀಡಲಾಗುವುದು ಎಂದರು.
ಡಿಎನ್ಎ ಸಂಶೋಧನಾ ಕೇಂದ್ರದ ನಿರ್ದೇಶಕ ಪೊ›. ಪ್ರಮೋದ ಗಾಯಿ ಮಾತನಾಡಿ, ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಉಪಕರಣವಿದ್ದು ಒದಗಿಸಲಾಗುವುದು. ಅಗತ್ಯ ತಜ್ಞರನ್ನೂ ನಿಯೋಜಿಸಲಾಗುವುದು ಎಂದರು.
ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಕಿಮ್ಸ್ನ ಡಾ. ಲಕ್ಷ್ಮೀಕಾಂತ, ಡಾ. ಆಶಾ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನಕರ, ಕವಿವಿ ಅನುವಂಶಿಕಶಾಸ್ತ್ರ ವಿಭಾಗದ ಮುಖ್ಯಸ್ಥ ಪೊ›. ವೇದಮೂರ್ತಿ, ವಿಜ್ಞಾನಿ ಡಾ. ಸುಯಮೀಂದ್ರ ಕುಲಕರ್ಣಿ, ಇತರರಿದ್ದರು.