ಹಾವೇರಿ: ಅಸಿಲ್ ಕ್ರಾಸ್ ನಾಟಿ ಕೋಳಿ ತಳಿಯು ಗ್ರಾಮೀಣ ಭಾಗದ ಮಹಿಳಾ ಫಲಾನುಭವಿಗಳಿಗೆ ವರದಾನವಾಗಿದೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.
ನಗರದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಯೋಗ ದಲ್ಲಿ ಮಹಿಳಾ ಫಲಾನುಭವಿಗಳಿಗೆ ಉಚಿತವಾಗಿ ಅಸಿಲ್ ಕ್ರಾಸ್ ನಾಟಿ ಕೋಳಿಮರಿಗಳನ್ನು ವಿತರಿಸಿ ಮಾತನಾಡಿದ ಅವರು, ಈ ತಳಿಯ ಕೋಳಿಗಳ ಸಾಕಾಣಿಕೆಗೆ ವಿತರಿಸುವುದು ಉತ್ತಮ ಕಾರ್ಯವಾಗಿದೆ. ಗ್ರಾಮೀಣ ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬನೆಗೆ ಈ ಕೋಳಿ ಸಾಕಾಣಿಕೆ ಯಿಂದ ಅನುಕೂಲವಾಗಿದೆ. ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಪಿ.ಎನ್. ಹುಬ್ಬಳ್ಳಿ ಮಾತನಾಡಿ, ಅಸಿಲ್ ಕ್ರಾಸ್ ನಾಟಿ ಕೋಳಿ ತಳಿಯು ಮೊಟ್ಟೆ ಉತ್ಪಾದನೆ ಹಾಗೂ ಮಾಂಸದ ಉತ್ಪಾದನೆ ಎರಡಕ್ಕೂ ಅರ್ಹ ತಳಿಯಾಗಿದೆ. ಒಂದು ಕೋಳಿಯು ವರ್ಷಕ್ಕೆ ಸರಾಸರಿ 180ರಿಂದ 200 ಮೊಟ್ಟೆಗಳ ಉತ್ಪಾದನೆಯ ಸಾಮರ್ಥ್ಯ ಹೊಂದಿದೆ. 3ರಿಂದ 4 ತಿಂಗಳ ವಯಸ್ಸಿನಲ್ಲಿ ಸುಮಾರು 2ರಿಂದ 3 ಕೆಜಿಯಷ್ಟು ತೂಕ ಹೊಂದುತ್ತದೆ. ಗ್ರಾಮೀಣ ಮಹಿಳೆಯರು ಹಿತ್ತಲ ಕೋಳಿಗಳಾಗಿ ಇವುಗಳನ್ನು ಅತಿಕಡಿಮೆ ಖರ್ಚಿನಲ್ಲಿ ಸಾಕುವುದರಿಂದ ತುಂಬಾ ಲಾಭದಾಯಕವಾಗಿದೆ ಎಂದರು.
ತಾಲೂಕಿನ ಕನಕಾಪುರ ಮತ್ತು ಚಿಕ್ಕಲಿಂಗದಹಳ್ಳಿ ಗ್ರಾಮಗಳ 42 ಫಲಾನುಭವಿಗಳಿಗೆ 5 ವಾರದ ತಲಾ 38 ಕೋಳಿಮರಿಗಳಂತೆ 1,596 ಕೋಳಿಮರಿ ಗಳನ್ನು ವಿತರಿಸಲಾಗುತ್ತಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರು, ಪಶು ಇಲಾಖೆ ಪಾಲಿಕ್ಲಿನಿಕ್ನ ಉಪನಿರ್ದೇಶಕ ಡಾ. ಎಚ್.ಬಿ. ಸಣ್ಣಕ್ಕಿ, ಸಹಾಯಕ ನಿರ್ದೇಶಕ ಡಾ. ಬಿರೇಶ ಸಣ್ಣಪುಟ್ಟಕ್ಕನವರ, ಡಾ. ಮಹೇಶ ಸವಣೂರ, ಜಾನುವಾರು ಅಭಿವೃದ್ದಿ ಅಧಿಕಾರಿ ಎಸ್.ಎಫ್. ಕರಿಯಪ್ಪನವರ, ಕನಕಾಪುರದ ಮಾಲತೇಶ ಗಾಜಿ ಉಪಸ್ಥಿತರಿದ್ದರು.