ಕಾರವಾರ: ಮದ್ಯದ ಅಭಿಷೇಕ, ಸಿಗರೇಟಿನ ಆರತಿ ಮೂಲಕ ಪೂಜೆಗೊಳ್ಳುವ ಇಲ್ಲಿನ ಕೋಡಿಬಾಗದ ಖಾಪ್ರಿ ದೇವರ ಜಾತ್ರೆ ಭಾನುವಾರ ಸರಳವಾಗಿ ನಡೆಯಿತು.
ಕರೊನಾ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನೀಡುವ ಸೂಚನೆ ಪಾಲಿಸುವ ಸಲುವಾಗಿ ವರ್ಷಕ್ಕಿಂತ ಕೊಂಚ ಬೇಗನೆ ಜಾತ್ರಾ ವಿಧಿ, ವಿಧಾನಗಳನ್ನು ಮುಗಿಸಲಾಯಿತು. ಮಧ್ಯಾಹ್ನದ ಹೊತ್ತಿಗೆ ಜಾತ್ರೆಯಲ್ಲಿ ಸಾಕಷ್ಟು ಸರದಿ ಸಾಲು ಕಂಡು ಬರುತ್ತಿತ್ತು. ಆದರೆ, ಈ ಬಾರಿ ಮಧ್ಯಾಹ್ನ ಸುಲಭವಾಗಿ ದೇವರ ದರ್ಶನ ಸಾಧ್ಯವಾಯಿತು.ಭಕ್ತರು ಹಣ್ಣು, ಕಾಯಿ, ಹೂವು, ಅರಿಶಿನ, ಕುಂಕುಮ ಊದುಬತ್ತಿಯ ಜತೆಗೆ ಸಿಗರೇಟ್ ಹಾಗೂ ಗೋವಾ ಮದ್ಯದ ಬಾಟಲಿ, ಕೋಳಿಗಳನ್ನು ಗಳನ್ನು ತಂದು ಅರ್ಪಿಸಿದರು. ಹಲವರು ಬಾಳೆ ಕೊನೆ, ಕಾಯಿಯ ತುಲಾಭಾರ ಹರಕೆ ಸಮರ್ಪಿಸಿದರು.
ಬಂಗಾರಮಕ್ಕಿಯಲ್ಲಿ ಶರಾವತಿ ಕುಂಭ ರದ್ದು
ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯಲ್ಲಿ ಏಪ್ರಿಲ್ 2 ರಿಂದ 8 ರವರೆಗೆ ನಡೆಯಬೇಕಿದ್ದ ರಾಮನವಮಿ, ಶರಾವತಿ ಕುಂಭ, ಸಂಸ್ಕೃತಿಕುಂಭ, ಮಲೆನಾಡ ಉತ್ಸವ-2020, ಶ್ರೀನಿವಾಸ ಕಲ್ಯಾಣ್ಯೋತ್ಸವಗಳನ್ನು ರದ್ದು ಮಾಡಲಾಗಿದೆ ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ. ಈ ಎಲ್ಲ ಕಾರ್ಯಕ್ರಮಗಳನ್ನು ರಾಮ ನವಮಿಯಿಂದ ಹನುಮ ಜಯಂತಿಯವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ದೇಶದಾದ್ಯಂತ ಕೋವಿಡ್-19 ಮಹಾಮಾರಿ ರೋಗವು ಹಬ್ಬುವ ಆತಂಕವಿದೆ. ಉತ್ಸವದ ಸಮಯದಲ್ಲಿ ಸಹಸ್ರಾರು ಭಕ್ತರು ಸೇರುವ ಕಾರಣದಿಂದ, ಈ ವೈರಸ್ನಿಂದ ತೊಂದರೆ ಉಂಟಾಗಬಹುದೆಂದು ಮುಂಜಾಗೃತಾ ಕ್ರಮವಾಗಿ ಈ ವರ್ಷದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಕೇವಲ ರಥೋತ್ಸವ ಕಾರ್ಯಕ್ರಮವನ್ನು ಮಾತ್ರ ಅತಿ ಸರಳವಾಗಿ ಶಾಸ್ತ್ರೋಕ್ತವಾಗಿ ನಡೆಸಲು ತೀರ್ವನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಅನ್ನ ಸಂತರ್ಪಣೆ ರದ್ದು
ಕರೊನಾ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಮಾ.16 ರಂದು ಗುತ್ತಿಂಬೀರ ಜಾತ್ರೆಯ ಸಂದರ್ಭದಲ್ಲಿ ನಡೆಯಬೇಕಿದ್ದ ಅನ್ನ ಸಂತರ್ಪಣೆ ಹಾಗೂ ನಾಟಕವನ್ನು ರದ್ದು ಮಾಡಲಾಗಿದೆ. ಜಾತ್ರೆಯ ಧಾರ್ವಿುಕ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿವೆ.