ಜಿಲ್ಲೆ

ಕೋಟಿ ಖರ್ಚಾದರೂ ಬಳಕೆಯಾಗದ ಸಿಬಿಟಿ

ಆನಂದ ಅಂಗಡಿ ಹುಬ್ಬಳ್ಳಿ

ಕದ್ದುಮುಚ್ಚಿ ಮದ್ಯ ಸೇವಿಸುವವರಿಗೆ ಹೇಳಿ ಮಾಡಿಸಿದ ಜಾಗ… ಅಕ್ರಮ ಚಟುವಟಿಕೆಗಳ ತಾಣ…ಭದ್ರತೆಯಂತೂ ಇಲ್ಲವೇ ಇಲ್ಲ..

ಹೌದು, ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ವಿುಸಿರುವ ಹುಬ್ಬಳ್ಳಿಯ ಸಿಬಿಟಿ ಕಟ್ಟಡ ಅಕ್ರಮ ಚಟುವಟಿಕೆಗಳ ತಾಣವಾಗಿದೆ.

ಸಾರಿಗೆ ಬಸ್​ಗಳ ಸಂಚಾರ ಹಾಗೂ ನಿರ್ವಹಣೆಗೆ ನೆಲ ಮಹಡಿಯ ಅರ್ಧಭಾಗ ಮಾತ್ರ ಬಳಕೆಯಾಗುತ್ತಿದೆ. ಈ ಕಟ್ಟಡದ ಒಳಗೆ ಯಾರೇ ಹೋಗಿಬಂದರೂ ಕೇಳುವವರೂ ಇಲ್ಲದಂತಾಗಿದೆ. ಹಗಲು ಹೊತ್ತಿನ ಪರಿಸ್ಥಿತಿಯೇ ಹೀಗಾದರೆ ರಾತ್ರಿಯ ಸನ್ನಿವೇಶವಂತೂ ದೇವರಿಗೇ ಪ್ರೀತಿ !

ವಾಣಿಜ್ಯ ಬಳಕೆ ಇಲ್ಲ: ನವೀಕರಣಗೊಂಡ ಇಲ್ಲಿನ ಸಿಬಿಟಿ ಕಟ್ಟಡದಲ್ಲಿನ ವಾಣಿಜ್ಯ ಮಳಿಗೆಗಳು ಇನ್ನೂ ಬಿಕರಿಯಾಗದೇ ಸಂಪೂರ್ಣ ಕಟ್ಟಡ ಹಾಳು ಕೊಂಪೆಯಂತಾಗಿದೆ. ಸುಮಾರು 17.34 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿದ ಸಿಬಿಟಿಯ ನವೀಕೃತ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು 3 ವರ್ಷ ಸಮೀಪಿಸುತ್ತಿದೆ. ಆದರೂ ಕಟ್ಟಡದ ಇತರ ಮಳಿಗೆಗಳ ಉಪಯೋಗವಾಗುತ್ತಿಲ್ಲ.

ನೆಲ ಮಹಡಿಯನ್ನು ಸಾರಿಗೆ ಬಸ್​ಗಳ ನಿರ್ವಹಣೆಗಾಗಿ ವಾಯವ್ಯ ಸಾರಿಗೆ ಸಂಸ್ಥೆ ಮೀಸಲಿಟ್ಟಿದೆ. ಇನ್ನುಳಿದ ಮಹಡಿಯನ್ನು ವಾಣಿಜ್ಯ ಅಥವಾ ಇತರ ಕಚೇರಿಗಳ ಬಳಕೆಗೆ ನೀಡಿದರೆ ಬಾಡಿಗೆಯಿಂದ ಲಾಭ ಗಳಿಸಬಹುದೆಂಬ ಉದ್ದೇಶ ಸಂಸ್ಥೆಯದ್ದಾಗಿತ್ತು. ಸುಮಾರು ನಾಲ್ಕೈದು ತಿಂಗಳ ಹಿಂದೆ ಸಿಬಿಟಿ ಕಟ್ಟಡದಲ್ಲಿನ ಮಳಿಗೆಗಳನ್ನು ಬಾಡಿಗೆ ನೀಡುವುದಕ್ಕಾಗಿ ಟೆಂಡರ್ ಕರೆಯಲಾಗಿತ್ತು. ಆದರೆ, ಟೆಂಡರ್ ಪ್ರಕ್ರಿಯೆಯಲ್ಲಿ ವ್ಯಾಪಾರಿಗಳು ಪಾಲ್ಗೊಳ್ಳಲಿಲ್ಲ. ಹೀಗಾಗಿ ಕೆಲ ದಿನಗಳ ಹಿಂದೆ ಮತ್ತೆ ಟೆಂಡರ್ ಕರೆಯಲಾಗಿದೆ. ಸಾರ್ವಜನಿಕರ ಕೋಟ್ಯಂತರ ರೂ. ತೆರಿಗೆ ಹಣ ವೆಚ್ಚ ಮಾಡಿ ಕಟ್ಟಿರುವ ಈ ಕಟ್ಟಡ ಸಾರಿಗೆ ಸಂಸ್ಥೆಗೆ ನುಂಗಲಾರದ ತುತ್ತಾಗಿದ್ದು, ಲಕ್ಷಾಂತರ ರೂ. ನಷ್ಟವಾಗುತ್ತಿದೆ.

ಅಪೂರ್ಣ ಕಾಮಗಾರಿ: ನವೀಕೃತ ಸಿಬಿಟಿ ಕಟ್ಟಡದಲ್ಲಿನ ಕಾಮಗಾರಿಗಳು ಅಧಿಕಾರಿಗಳ ಪ್ರಕಾರ ಪೂರ್ಣಗೊಂಡಿದ್ದರೂ ಸಾಕಷ್ಟು ಕೆಲಸ ಇನ್ನೂ ಬಾಕಿ ಇದೆ. ಈ ಕಟ್ಟಡಕ್ಕೆ ಲಿಫ್ಟ್ ಸೌಲಭ್ಯ ಒದಗಿಸುವ ಕಾಮಗಾರಿ ಅರೆಬರೆಯಾಗಿಯೇ ಉಳಿದಿದೆ. 5ನೇ ಮಹಡಿಯ ನೆಲಕ್ಕೆ ಟೈಲ್ಸ್ ಜೋಡಿಸಿಲ್ಲ. ನೆಲ ಮಹಡಿಯಲ್ಲಿರುವ ರ್ಪಾಂಗ್ ಪ್ರದೇಶವನ್ನು ಉಪಯೋಗಿಸದ ಕಾರಣ ಪ್ರಯಾಣಿಕರು ಸಿಬಿಟಿ ಸುತ್ತಲಿನ ರಸ್ತೆ ಬದಿ ಬೈಕ್​ಗಳನ್ನು ಇಟ್ಟು ಹೋಗುವುದು ಅನಿವಾರ್ಯವಾಗಿದೆ. ಈ ಮಧ್ಯೆ ಅನೈತಿಕ ಚಟುವಟಿಕೆಗಳ ತಾಣವಾಗಿಯೂ ಈ ಕಟ್ಟಡ ಬಳಕೆಯಾಗುತ್ತಿದ್ದು, ಮದ್ಯ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ.

ಕಾಮಗಾರಿ ವಿವರ: ಸಿಬಿಟಿ ಕಟ್ಟಡ ನವೀಕರಣ ಕಾಮಗಾರಿಗೆ 2012-13ರಲ್ಲಿ ಚಾಲನೆ ನೀಡಲಾಯಿತು. ಮೊದಲಿನ ಕಟ್ಟಡ ನೆಲಸಮಗೊಳಿಸಿ, 3 ಮಹಡಿಯ ಕಟ್ಟಡ ನಿರ್ವಣಕ್ಕೆ ಸರ್ಕಾರ 10.34 ಕೋಟಿ ರೂ. ಬಿಡುಗಡೆಗೊಳಿಸಿತ್ತು. ಈ ಮಧ್ಯೆ ಯಾವುದೇ ಬಲವಾದ ಕಾರಣ ಇಲ್ಲದೇ 3 ಮಹಡಿಯ ಕಟ್ಟಡವನ್ನು 5 ಮಹಡಿಗೆ ಏರಿಸಲು ತೀರ್ವನಿಸಲಾಯಿತು. ಇದಕ್ಕಾಗಿ ಸರ್ಕಾರ ಮತ್ತೆ 7 ಕೋಟಿ ರೂ. ಹೆಚ್ಚುವರಿ ಬಿಡುಗಡೆಗೊಳಿಸಿತು. 2016ರಲ್ಲಿ 5 ಮಹಡಿಯ ಕಟ್ಟಡ ನಿರ್ವಣಕ್ಕೆ ಚಾಲನೆ ದೊರೆಯಿತು. ನವೀಕೃತ ಕಟ್ಟಡದ 5 ಮಹಡಿಗಳಲ್ಲಿ 2 ಮಹಡಿಗಳನ್ನು ನಗರ ಸಾರಿಗೆ ಹಾಗೂ ಬಿಆರ್​ಟಿಎಸ್​ಗೆ ಬಳಸಿಕೊಳ್ಳಲು ತೀರ್ವನಿಸಲಾಗಿದೆ. ಇನ್ನುಳಿದ 3 ಮಹಡಿಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಾಡಿಗೆ ನೀಡುವ ಉದ್ದೇಶವಿದೆ.

ಸಿಬಿಟಿ ಕಟ್ಟಡದಲ್ಲಿನ ಮಳಿಗೆಗಳನ್ನು ಬಾಡಿಗೆ ನೀಡುವುದಕ್ಕೆ ಈ ಹಿಂದೆ ಟೆಂಡರ್ ಕರೆದಿದ್ದಾಗ ಲಾಕ್​ಡೌನ್​ನಿಂದಾಗಿ ವ್ಯಾಪಾರಿಗಳು ಪಾಲ್ಗೊಂಡಿರಲಿಲ್ಲ. ಇದೀಗ ಮತ್ತೆ ಟೆಂಡರ್ ಕರೆಯಲಾಗಿದೆ. ಮಾರುಕಟ್ಟೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವುದರಿಂದ ವ್ಯಾಪಾರಸ್ಥರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. | ಕೆ.ಎಲ್. ಗುಡ್ಡೆನ್ನವರ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ