ಕೊಳ್ಳೇಗಾಲ: ಕರ್ನಾಟಕ ವಿದ್ಯುತ್ ಮಂಡಳಿ ಪ.ಜಾತಿ, ಪ.ವರ್ಗ ಕಲ್ಯಾಣ ಸಂಸ್ಥೆ (466)ವಿಭಾಗೀಯ ಸಂಸ್ಥೆ ಕೊಳ್ಳೇಗಾಲ ವತಿಯಿಂದ ಪಟ್ಟಣದಲ್ಲಿ ಬುಧವಾರ ವಿಜೃಂಭಣೆಯಿಂದ 134ನೇ ವರ್ಷದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು.
ಬೆಳಗ್ಗೆ 11 ಗಂಟೆಯಲ್ಲಿ ಕೊಳ್ಳೇಗಾಲ ಉಪವಿಭಾಗ ಕಚೇರಿಯಲ್ಲಿ ಸೆಸ್ಕ್ ಅಧಿಕಾರಿಗಳು, ನೌಕರರು ಹಾಗೂ ಸಿಬ್ಬಂದಿ ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಅಂಬೇಡ್ಕರ್ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಸೆಸ್ಕ್ ಕಚೇರಿವರೆವಿಗೂ ಮೆರವಣಿಗೆ ಮಾಡಲಾಯಿತು.
ನಂತರ, ಸೆಸ್ಕ್ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರ ಚಾಮರಾಜನಗರ ವಸತಿಯುಕ್ತ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಪಿ.ದೇವರಾಜು ಮಾತನಾಡಿ, ಅಂಬೇಡ್ಕರ್ ಅವರ ಜಯಂತಿಗಳನ್ನು ಆಚರಿಸುವುದರ ಜತೆಗೆ ಹೆಚ್ಚಾಗಿ ಅವರ ತತ್ವ-ಸಿದ್ಧಾಂತಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬರು ಜೀವಿಸಬೇಕಿದೆ. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು. ದುಶ್ಚಟಗಳಿಂದ ದೂರವಿದ್ದರು. ಶೋಷಿತರ ಹಾಗೂ ಅವಕಾಶ ವಂಚಿತರ ಪರವಾಗಿ ಹೋರಾಟ ಮಾಡಿ ದವರು. ಭಾರತ ಸಂವಿಧಾನ ನೆರಳಿನಲ್ಲಿ ನಾವೆಲ್ಲರೂ ಬದುಕು ಕಟ್ಟಿ ಕೊಂಡಿದ್ದೇವೆ. ಹಾಗಾಗಿ ಅಂಬೇಡ್ಕರ್ ಅವರ ನಿಜವಾದ ಆಶಯಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ. ಮದ್ಯ ಸೇವನೆ ತ್ಯಜಿಸಬೇಕಿದೆ. ಪುಸ್ತಕಗಳನ್ನು ಓದಿ ಅರಿವನ್ನು ಪಡೆದುಕೊಳ್ಳಬೇಕಿದೆ ಎಂದರು.
ಕೊಳ್ಳೇಗಾಲ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ತಬಸ್ಸುಮ್ ಅಬ್ಜಾ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜ್ಞಾನಕ್ಕೆ ಸರಿಸಾಟಿ ಯಾರು ಇಲ್ಲ. ಇಂದು ಅವರ ಜಯಂತಿಯನ್ನು ಭಾವನಾತ್ಮಕವಾಗಿ ಆಚರಣೆ ಮಾಡಿದ್ದೇವೆ. ಇದು ಒಂದು ದಿನಕ್ಕೆ ಸಿಮೀತವಾಗಕೂಡದು. ನಿತ್ಯವೂ ಅಂಬೇಡ್ಕರ್ ಅವರ ಚಿಂತನೆ ಹಾಗೂ ಆಶಯದಲ್ಲಿ ಜೀವಿಸಬೇಕಿದೆ. ಅಂಬೇಡ್ಕರ್ ಅವರು ಅಧ್ಯಯನ ಮಾಡಿದಷ್ಟು ಪುಸ್ತಕಗಳನ್ನು ಯಾರು ಮಾಡಿಲ್ಲ. 32 ಪದವಿಗಳನ್ನು ಪಡೆದು ಜ್ಞಾನ ಭಂಡಾರವೇ ಆಗಿದ್ದರು. ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕೆಂಬ ಉದ್ದೇಶದಡಿ ಹೋರಾಟ ನಡೆಸಿದರು. ಇಂದು ನಾನು ಕೂಡ ಅಧಿಕಾರಿಯಾಗಲು ಅವರೇ ಕಾರಣ. ಹಾಗಾಗಿ ಅವರ ತತ್ವ ಹಾಗೂ ಆದರ್ಶಗಳನ್ನು ನಮ್ಮ ಕರ್ತವ್ಯದಲ್ಲಿ ಅಳವಡಿಸಿಕೊಂಡು ಜನರಿಗೆ ಉತ್ತಮ ಸೇವೆ ನೀಡೋಣ ಎಂದರು.
ಕುಣಿದು ಕುಪ್ಪಳಿಸಿ ನೌಕರರು: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ವಾದ್ಯ ಮೇಳ ಹಾಗೂ ಡಿಜೆ ಸೌಂಡ್ಸ್‌ಗೆ ಸೆಸ್ಕ್ ನೌಕರರು ಕುಣಿದು ಕುಪ್ಪಳಿಸಿದರು. ಚಾಮರಾಜನಗರ ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್ ಕುಮಾರ್, ಲೆಕ್ಕಾಧಿಕಾರಿ ಭಾಸ್ಕರ್, ಕ.ವಿ.ಪ್ರ.ನಿ. ನೌಕರರ ಸಂಘ ಉಪಾಧ್ಯಕ್ಷ ಎನ್.ಮಹೇಶ್, ಉಪವಿಭಾಗ ಪ್ರಭಾರ ಲೆಕ್ಕಾಧಿಕಾರಿ ಪ್ರಸನ್ನ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ರಾಜು, ಯಳಂದೂರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಲಿಂಗರಾಜು, ವಿಭಾಗ ಕಚೇರಿ ಎಇಇ ಶ್ರಿನಿಧಿ, ಕ.ವಿ.ಮಂ. ಪ.ಜಾತಿ ಪ.ವರ್ಗ ಕಲ್ಯಾಣ ಸಮಿತಿ ಉಪವಿಭಾಗ ಸಮಿತಿ ಸದಸ್ಯರು ಇತರರಿದ್ದರು.