ಜಿಲ್ಲೆ

ಕೊಳ್ಳೇಗಾಲದಲ್ಲಿ ಶ್ರೀ ಮಳಿಗೆ ಮಾರಮ್ಮನ ತಂಪು ಉತ್ಸವ

ಕೊಳ್ಳೇಗಾಲ: ಪಟ್ಟಣದ ಮಾರಿಗುಡಿ ಬೀದಿಯಲ್ಲಿ ಶ್ರೀ ಮಳಿಗೆ ಮಾರಮ್ಮನ ತಂಪು ಉತ್ಸವ ಮಂಗಳವಾರ ಶ್ರದ್ಧಾ, ಭಕ್ತಿಯಿಂದ ಜರುಗಿತು.
ಆಷಾಢ ಮಾಸದ ಮೂರನೇ ವಾರದ ಮಂಗಳವಾರ ಪ್ರತಿ ವರ್ಷ ಮಳಿಗೆ ಮಾರಮ್ಮನ ತಂಪು ಉತ್ಸವ ನಡೆಸಲಾಗುತ್ತದೆ. ನೂರಾರು ವರ್ಷಗಳಿಂದ ಕೊಳ್ಳೇಗಾಲದಲ್ಲಿ ನೆಲೆಸಿರುವ ಮಳಿಗೆ ಮಾರಮ್ಮ ದೇವಿಯ ಆರಾಧನೆಯನ್ನು ಇಲ್ಲಿನ ದೇವಾಂಗ ಸಮಾಜ, ಈಡಿಗ ಸಮಾಜ, ಹೆಳವ ಜನಾಂಗದವರು ಸೇರಿ ಉತ್ಸವವನ್ನು ಮಾಡುತ್ತಾರೆ.


ತಂಪು ಹಬ್ಬದ ಹಿನ್ನೆಲೆಯಲ್ಲಿ ಕಾವೇರಿ ನದಿಯಿಂದ ದೇವರನ್ನು ತಂದು ಅಕ್ಷತೆ ಹಾಕಲಾಯಿತು. ಹಾಲು, ಮೊಸರಿನಿಂದ ಮಳಿಗೆ ಮಾರಮ್ಮ ದೇವಿಗೆ ಅಭಿಷೇಕ ನೇರವೇರಿಸಿದ ಬಳಿಕ ಪಂಚಾಮೃತ ನೈವೇದ್ಯ ಇಟ್ಟು ಮಂಗಳಾರತಿ ಸಲ್ಲಿಸಿದ ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಭಕ್ತರು ತಂಬಿಟ್ಟು ಆರತಿ, ಹಣ್ಣು-ಕಾಯಿ ಪೂಜೆ ಸಲ್ಲಿಸಿದರು. ದಿನಪೂರ್ತಿ ದೇವಿಯ ಪೂಜೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಪೂಜಾ ಕೈಂಕರ್ಯಗಳನ್ನು ಅರ್ಚಕ ಸರ್ವೇಶ್ ನೇರವೇರಿಸಿದರು. ದೇವರ ದರ್ಶನ ಪಡೆದ ಭಕ್ತರು ಮನೆಗೆ ತೆರಳಿ ಆಹಾರ ತಯಾರಿಸಿ ದೇವಿ ಹೆಸರಲ್ಲಿ ಎಡೆ ಹಾಕಿದರು.


ಉತ್ಸವ: ತಂಪು ಹಬ್ಬದ ಹಿನ್ನೆಲೆಯಲ್ಲಿ ಮಳಿಗೆ ಮಾರಮ್ಮ ದೇವಿಯನ್ನು ರಥದ ಮೇಲೆ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದ ಬಳಿಕ ದೇವಾಂಗ ಪೇಟೆ, ಈಡಿಗರ ಬೀದಿ, ಹೆಳವರ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.


ಸಾಂಸ್ಕೃತಿಕ ಕಾರ್ಯಕ್ರಮ: ಜು.12ರಂದು ಶ್ರೀ ಮಳಿಗೆ ಮಾರಮ್ಮನ ಮಹಿಳಾ ಸಂಘದವರಿಂದ ಭಕ್ತಿ ಗೀತೆಗಳ ಗಾಯನ. 13ರಂದು ವಿದುಷಿ ಸೌಜನ್ಯಾ ಪ್ರಭಾಕರ್ ಅವರ ತಂಡದಿಂದ ನಾಪುರ ನೃತ್ಯಾಂಜಲಿ ಭರತನಾಟ್ಯ ಕಾರ್ಯಕ್ರಮ, 14ರಂದು ದೀಪಾಲಪೂಜೆ, 15 ರಂದು ಭಕ್ತಿ ಗೀತೆಗಳ ಗಾಯನ, 16ರಂದು ಡಿ.ಅಶ್ವಿನಿ ಮತ್ಯು ಶಿಷ್ಯ ವೃಂದದಿಂದ ಜಾನಪದ ಗೀತೆಗಳು, 17, 18, 19 ರಂದು ಭಕ್ತಿ ಗೀತೆಗಳ ಗಾಯನ, 20ರಂದು ಮಹಾ ಮಂಗಳಾರತಿ ನಡೆಯಲಿದ್ದು, ಪ್ರತಿ ದಿನ್ಯ ಸಂಜೆ ಉಯ್ಯಲೋತ್ಸವ ನೆರವೇರುತ್ತದೆ.