ಜಿಲ್ಲೆ

ಕೊಳ್ಳೇಗಾಲದಲ್ಲಿ ರಕ್ತದಾನ ಶಿಬಿರ

ಕೊಳ್ಳೇಗಾಲ: ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆಯಲ್ಲಿರುವ ಪತಂಜಲಿ ಯೋಗ ಮಂದಿರದಲ್ಲಿ ಜೆಎಸ್‌ಬಿ ಪ್ರತಿಷ್ಠಾನದ ವತಿಯಿಂದ ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿ ಆಚರಣೆ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಚಾಮರಾಜನಗರ ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕದ ಹಿರಿಯ ತಂತ್ರಜ್ಞ ಸತ್ಯಣ್ಣ ಮಾತನಾಡಿ, ರಕ್ತದಾನದಿಂದ ರಕ್ತದೊತ್ತಡ, ಮಧು ಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜತೆಗೆ ಆತ್ಮತೃಪ್ತಿ ಸಿಗುತ್ತದೆ. ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಜಿಲ್ಲೆಯಲ್ಲೇ ಪ್ರತಿವರ್ಷ ಹಲವು ಸಾವಿರ ಯೂನಿಟ್ ರಕ್ತದ ಕೊರತೆ ಎದುರಾಗುತ್ತಿದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ, ಗರ್ಭಿಣಿಯರು, ಬಾಣಂತಿಯರು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದಿಂದ ಗಾಯಾಳುಗಳು ಮೃತಪಡುತ್ತಿದ್ದಾರೆ. ಅಂತಹವರ ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು.

ಜೆಎಸ್‌ಬಿ ಪ್ರತಿಷ್ಠಾನದ ಅಧ್ಯಕ್ಷ ಶಶಿಕುಮಾರ್ ಮಾತನಾಡಿ, ಒಬ್ಬರ ರಕ್ತದಾನದಿಂದ ಕನಿಷ್ಠ ಮೂವರ ಪ್ರಾಣ ಉಳಿಸಬಹುದು. ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಮನುಷ್ಯ ದೇಹದಲ್ಲಷ್ಟೇ ರಕ್ತದ ಉತ್ಪಾದನೆ ಸಾಧ್ಯ. ಅದ್ದರಿಂದ ಎಲ್ಲರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು. ಶಿಬಿರದಲ್ಲಿ 45 ಜನರು ರಕ್ತದಾನ ಮಾಡಿದರು. ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಘಟಕದ ಸಿಬ್ಬಂದಿ ಸರಸ್ವತಿ, ಡಯಾನಾ, ಮಹದೇವಸ್ವಾಮಿ, ಮಹೇಶ, ಚಾಂದಿನಿ, ಜೆಎಸ್‌ಬಿ ಪ್ರತಿಷ್ಠಾನದ ಮಹದೇವಪ್ರಸಾದ್, ಲಿಂಗರಾಜು, ಚಂದ್ರು, ಶಿವಕುಮಾರ, ವೆಂಕಟೇಶ, ನಾಗಪ್ಪ ಮತ್ತಿತರಿದ್ದರು.