ಕೊಳ್ಳೇಗಾಲ: ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತ್ಯುತ್ಸವ ಮೆರವಣಿಗೆಯಲ್ಲಿ ವೀರಗಾಸೆ, ನಂದಿಧ್ವಜ ಸೇರಿದಂತೆ ಕಲಾ ತಂಡಗಳು ಮೇಳೈಸಿದವು.
ವೀರಗಾಸೆ, ನಂದಿಧ್ವಜ, ಕಳಸ, ಬಸವ, ವಾದ್ಯಮೇಳ, ಡೊಳ್ಳು ಕುಣಿತ, ಕಲಾ ತಂಡಗಳ ಪ್ರದರ್ಶನ, ಶರಣರ ವೇಷಧಾರಿಗಳು, ಗಾರುಡಿ ಗೊಂಬೆಗಳು ಶ್ರೀ ಬಸವೇಶ್ವರರ ಜಯಂತಿ ಮಹೋತ್ಸವಕ್ಕೆ ಮೆರುಗು ಹೆಚ್ಚಿಸಿದವು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಳ್ಳೇಗಾಲ ಘಟಕ, ಶ್ರೀ ಬಸವ ಜಯಂತಿ ಮಹೋತ್ಸವ ಸಮಿತಿ ಮತ್ತು ತಾಲೂಕು ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಬಸವೇಶ್ವರರ 892ನೇ ಜಯಂತಿ ಅಂಗವಾಗಿ ಪಟ್ಟಣದ ಎಂಜಿಎಸ್‌ವಿ ಕಾಲೇಜು ಆವರಣದಲ್ಲಿ ಚಿನ್ನದ ರಥದ ಮಾದರಿಯಲ್ಲಿ ಕೂರಿಸಿದ್ದ ಶ್ರೀ ಬಸವೇಶ್ವರರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ಸಾಲೂರು ಬೃಹನ್ಮಠದ ಶ್ರೀ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಳ್ಳೇಗಾಲ ತಾಲೂಕು ಘಟಕ ಗೌರವಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಎಲ್ಲ ಶ್ರೀಗಳು ಹಾಗೂ ಹರಗುರುಚರಮೂರ್ತಿಗಳು, ಹನೂರು ಶಾಸಕ ಎಂ.ಆರ್.ಮಂಜುನಾಥ್, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಜಿ.ಎನ್.ನಂಜುಂಡಸ್ವಾಮಿ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮಧುವನಹಳ್ಳಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮುಖಂಡ ನಿಶಾಂತ್, ಪ್ರೀತನ್ ನಾಗಪ್ಪ, ಎಸ್.ದತ್ತೇಶ್ ಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲಪುರ ನಂದೀಶ್, ತಾಲೂಕು ಅಧ್ಯಕ್ಷ ಪುಟ್ಟಣ್ಣ ಇತರರು ಬಸವೇಶ್ವರರಿಗೆ ಗೌರವ ಸಲ್ಲಿಸಿದರು.
ಬಳಿಕ ಡಾ.ರಾಜ್‌ಕುಮಾರ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಬ್ರದರನ್ ಚರ್ಚ್ ವೃತ್ತ, ಮಹದೇಶ್ವರ ಬೆಟ್ಟದ ರಸ್ತೆ ಮೂಲಕ ಸಾಗಿ ಜೆಎಸ್‌ಎಸ್ ಕಾಲೇಜು ತಲುಪಿತು. 4 ಸಾವಿರಕ್ಕೂ ಹೆಚ್ಚು ಜನರು ಶ್ರೀ ಬಸವೇಶ್ವರರ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
5 ಸಾವಿರ ಜನರಿಗೆ ಪ್ರಸಾದ ವ್ಯವಸ್ಥೆ
ಮೆರವಣಿಗೆಗೂ ಮೊದಲು ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಉಪಾಹಾರ ವಿತರಣೆ ಮಾಡಲಾಯಿತು. ಮೆರವಣಿಗೆ ನಡೆದ ಬಳಿಕ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ 5 ಸಾವಿರ ಜನರಿಗೆ ಮಧ್ಯಾಹ್ನ ಪ್ರಸಾದವನ್ನು ವಿನಿಯೋಗ ಮಾಡಲಾಯಿತು.
ಡಿಜೆ ಸೌಂಡ್ಸ್ ಗೆ ಕುಣಿದ ಯುವ ಸಮೂಹ
ಮೆರವಣಿಗೆ ಹಾದಿಯಲ್ಲಿ ಶ್ರೀ ಬಸವೇಶ್ವರರ ಚಿತ್ರ ಹೊಂದಿದ್ದ ಕೇಸರಿ ಧ್ವಜಗಳು ರಾರಾಜಿಸಿದವು. ದಾರಿಯುದ್ದಕ್ಕೂ ಕೇಸರಿ ಬಣ್ಣದ ಬಂಟಿಕ್ಸ್, ಫ್ಲೆಕ್ಸ್‌ಗಳನ್ನು ಕಟ್ಟಲಾಗಿತ್ತು. ವಿಶೇಷವಾಗಿ ಡಿಜೆ ಸೌಂಡ್ಸ್‌ಗೆ ಯುವಜನರು ಕುಣಿದು ಕುಪ್ಪಳಿಸಿದರು.
ಆಕರ್ಷಿಸಿದ ಕಲಾ ತಂಡಗಳು ಮೆರವಣಿಗೆಯಲ್ಲಿ ಗಾರುಡಿ ಗೊಂಬೆಗಳು, ವೀರಗಾಸೆ, ನಂದಿಧ್ವಜ, ಡೊಳ್ಳು ಕುಣಿತ ಎಲ್ಲರನ್ನೂ ಆಕರ್ಷಿಸಿತು. ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮ್ಮ ಪ್ರಭು, ಚೆನ್ನಬಸವಣ್ಣ ವೇಷಧಾರಿಗಳು ಗಮನ ಸೆಳೆದರು.
ಮೆರವಣಿಗೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ರಾಜು ತಿಮ್ಮರಾಜೀಪುರ, ಕಾರ್ಯದರ್ಶಿ ಕೆಂಪನಪಾಳ್ಯ ಮಹೇಶ್, ಖಜಾಂಚಿ ನಟರಾಜು, ಶ್ರೀ ಬಸವೇಶ್ವರ ಜಯಂತಿ ಉತ್ಸವ ಮೇಲ್ವಿಚಾರಕ ಬೂದಿತಿಟ್ಟು ಗುರುಸ್ವಾಮಿ, ಲಯನ್ಸ್ ಕಣ್ಣಿನ ಆಸ್ಪತ್ರೆಯ ಲೋಕೇಶ್ ಹೊಂಡರಬಾಳು, ಯುಪಿಎಸ್ ಮಹದೇವಸ್ವಾಮಿ, ರವಿಕುಮಾರ್, ಅಚ್ಗಾಳ್ ಮಹದೇವಸ್ವಾಮಿ, ರಕ್ಕಸನಪಾಳ್ಯ ಮಹೇಶ್, ಕುಣಗಳ್ಳಿ ಕಾಂತರಾಜು, ಪ್ರಭಾಕರ್ ಸರಗೂರು, ಮಂಜು ಕೆಂಪನಪಾಳ್ಯ, ಬೂದಿತಿಟ್ಟು ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಬಿ.ತೋಟೇಶ್, ಕದಲಿ ವೇದಿಕೆ ಪದಾಧಿಕಾರಿಗಳು ಹಾಗೂ ಅಕ್ಕನ ಬಳಗ ಸದಸ್ಯರು, ವೀರಶೈವ ಲಿಂಗಾಯತ ಸಮಾಜದ ಎಲ್ಲ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು. ಕೊಳ್ಳೇಗಾಲದಲ್ಲಿ ಶ್ರೀಬಸವೇಶ್ವರ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ಜರುಗಿದೆ. ಸಾವಿರಾರು ಜನರು ಸಂಭ್ರಮದಲ್ಲಿ ಭಾಗಿಯಾಗುವ ಮೂಲಕ ಮೆರವಣಿಗೆಯನ್ನು ಯಶಸ್ವಿಗೊಳಿಸಿದ್ದಾರೆ. ಕ್ರಾಂತಿಕಾರಿ ಬಸವಣ್ಣನವರ ವಚನಗಳ ಸಾರವನ್ನು ಪ್ರತಿಯೊಬ್ಬರೂ ಪಾಲನೆ ಮಾಡುವ ಮೂಲಕ ಜಯಂತ್ಯುತ್ಸವವನ್ನು ಅರ್ಥಪೂರ್ಣಗೊಳಿಸಲು ಕಂಕಣಬದ್ಧರಾಗಬೇಕು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಎಲ್ಲರ ಮೇಲೆ ಇರಲಿ. ಶ್ರೀ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಪೀಠಾಧಿಪತಿ, ಸಾಲೂರು ಬೃಹನ್ಮಠ, ಮಲೆ ಮಹದೇಶ್ವರ ಬೆಟ್ಟ ಬಸವಣ್ಣನವರು ಪ್ರತಿಪಾದಿಸಿದ ತತ್ವವನ್ನು ಎಲ್ಲರೂ ಅನುಸರಿಸುವ ಮೂಲಕ ಅವರಿಗೆ ಗೌರವ ಸಮರ್ಪಣೆ ಮಾಡಬೇಕು. ಕೊಳ್ಳೇಗಾಲದಲ್ಲಿ ಅದ್ದೂರಿ ಮೆರವಣಿಗೆ ಆಯೋಜಿಸಿರುವ ಸಂಘಟಕರ ಕಾರ್ಯ ಶ್ಲಾಘನೀಯ. ಎಂ.ಆರ್.ಮಂಜುನಾಥ್ ಹನೂರು ಶಾಸಕ