ಕೊಳ್ಳೇಗಾಲ ಪಟ್ಟಣದಲ್ಲಿರುವ ನ್ಯಾಷನಲ್ ಶಾಲಾ ಕೊಠಡಿಯಲ್ಲಿ ಚುನಾವಣಾ ಅಧಿಕಾರಿಗಳು ಮತಯಂತ್ರಗಳನ್ನು ಪರಿಶೀಲಿಸಿದರು. 
ಜಿಲ್ಲೆ

ಕೊಳ್ಳೇಗಾಲ ನಗರಸಭೆ ಉಪಚುನಾವಣೆ ಇಂದು

Chamarajanagar


ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು


ಕೊಳ್ಳೇಗಾಲ: ನಗರಸಭೆಯ 7 ವಾರ್ಡ್‌ಗಳಿಗೆ ಶುಕ್ರವಾರ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತಗಟ್ಟೆಗಳಿಗೆ ಅಧಿಕಾರಿಗಳು ಗುರುವಾರ ತೆರಳಿದರು.

ಪಟ್ಟಣದ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದಿದ್ದ ಮಸ್ಟರಿಂಗ್ ಕೇಂದ್ರದಲ್ಲಿ ಮತ ಯಂತ್ರಗಳನ್ನು ಪರೀಶಿಲನೆ ನಡೆಸಿದ ಅಧಿಕಾರಿಗಳು ಬಳಿಕ ಮತಗಟ್ಟೆಗಳಿಗೆ ಸರ್ಕಾರಿ ವಾಹನಗಳ ಮೂಲಕ ತೆರಳಿದರು. ಏಳು ವಾರ್ಡ್‌ಗಳ ಚುನಾವಣೆಗೆ 10 ಮತಗಟ್ಟೆಗಳನ್ನು ತೆರೆಯಲಾಗಿದ್ದು, 4583 ಪುರುಷರು, 4516 ಮಹಿಳಾ ಮತದಾರರು ಸೇರಿದಂತೆ ಒಟ್ಟು 8,900 ಮತದಾರರಿದ್ದಾರೆ.

ಪ್ರತಿ ಬೂತ್‌ನಲ್ಲಿ ಪಿಆರ್‌ಒ, ಎಪಿಆರ್‌ಒ ಹಾಗೂ ಪಿಒ ಸೇರಿದಂತೆ ತಲಾ ನಾಲ್ಕು ಜನರನ್ನು ಎಲ್ಲ ಬೂತ್‌ಗಳಿಗೆ ನೇಮಕ ಮಾಡಲಾಗಿದೆ. ಮತಗಟ್ಟೆಯಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಲಾಗಿದೆ ಎಂದು ತಹಸೀಲ್ದಾರ್ ಮಂಜುಳಾ ತಿಳಿಸಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿಕೊಂಡಿದೆ. ಒಬ್ಬರು ಡಿವೈಎಸ್ಪಿ, 4 ವೃತ್ತ ನಿರೀಕ್ಷಕರು, 6 ಪಿಎಸ್‌ಐ ಗಳು, 8 ಎಎಸ್‌ಐ, 65 ಮುಖ್ಯ, 10 ಮಹಿಳಾ ಪೇದೆ ಹಾಗೂ 1 ಡಿಆರ್ ವಾಹನವನ್ನು ನಿಯೋಜನೆ ಮಾಡಲಾಗಿದೆ. ಅ.28 ರಂದು ಉಪಚುನಾವಣೆ ನಡೆಯಲಿದ್ದು, ಮತ ಏಣಿಕೆ ಕಾರ್ಯ 31ರಂದು ನಡೆಯಲಿದೆ.

24 ಅಭ್ಯರ್ಥಿಗಳು ಸ್ಪರ್ಧೆ: ವಾರ್ಡ್ ನಂ. 2, 6, 7, 13, 21, 25 ಹಾಗೂ 26ನೇ ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 24 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದ್ದಾರೆ. 2ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಗಲಕ್ಷ್ಮೀ, ಕಾಂಗ್ರೆಸ್‌ನಿಂದ ಭಾಗ್ಯಾ ಹಾಗೂ ಎಸ್‌ಡಿಪಿಐ ಅಭ್ಯರ್ಥಿಯಾಗಿ ಶಾಂತಲಕ್ಷ್ಮೀ ಕಣದಲ್ಲಿದ್ದಲಿದ್ದಾರೆ.

6ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿ ಎಂ.ಮಾನಸಾ, ಕಾಂಗ್ರೆಸ್‌ನಿಂದ ಸಂಪತ್‌ಕುಮಾರಿ ನಡುವೆ ಸ್ಪರ್ಧೆ ಏರ್ಪಟಿದೆ. 7ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿ ನಾಸೀರ್‌ಶರೀಫ್, ಕಾಂಗ್ರೆಸ್‌ನಿಂದ ಮಹಮ್ಮದ್‌ಕಿಜರ್, ಬಿಎಸ್ಪಿಯಿಂದ ಇನಾಯತ್ ಪಾಷ, ಜೆಡಿಎಸ್‌ನಿಂದ ಮಹಮ್ಮದ್ ಇರ್ಫಾನ್, ಪಕ್ಷೇತರ ಅಭ್ಯರ್ಥಿಯಾಗಿ ಶಿವಶಂಕರ್ ಕಣಕ್ಕಿಳಿದಿದ್ದಾರೆ.

13ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಪಿ.ಎನ್.ಸರಸ್ವತಿ, ಬಿಜೆಪಿಯ ಪವಿತ್ರಾ ನಡುವೆ ಸೆಣಸಾಟ ನಡೆಯಲಿದೆ. ಅಂತೆಯೇ 21ನೇ ವಾರ್ಡ್‌ನಿಂದ ಬಿಜೆಪಿಯಿಂದ ಪ್ರಕಾಶ್, ಕಾಂಗ್ರೆಸ್‌ನಿಂದ ಕೆ.ಕೆ.ಮೂರ್ತಿ, ಬಿಎಸ್ಪಿಯಿಂದ ಎಂ.ಆರ್.ಲೋಕೇಶ್ ಹಾಗೂ ಕೆ.ಆರ್.ಎಸ್‌ನಿಂದ ಜಗದೀಶ್ ಕಣದಲ್ಲಿದ್ದಾರೆ. 25ನೇ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮೇಶ್, ಬಿಜೆಪಿಯಿಂದ ರಾಮಕೃಷ್ಣ , ಬಿಎಸ್ಪಿಯಿಂದ ರಂಗಸ್ಬಾಮಿ, ಪಕ್ಷೇತರ ಅಭ್ಯರ್ಥಿಗಳಾಗಿ ಮಹದೇವು ಮತ್ತು ಶಿವಮಲ್ಲು ಅಖಾಡದಲ್ಲಿದ್ದಾರೆ. 26 ನೇ ವಾರ್ಡ್‌ನಿಂದ ಬಿಜೆಪಿಯಿಂದ ನಾಗಸುಂದ್ರಮ್ಮ , ಕಾಂಗ್ರೆಸ್‌ನಿಂದ ಸುನೀತಾ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕವಿತಾ ಸ್ಪರ್ಧೆಗಿಳಿದಿದ್ದಾರೆ.