ಜಿಲ್ಲೆ

ಕೊಳ್ಳೇಗಾಲ ಕ್ಷೇತ್ರದ ಕೆರೆಗಳ ಅಭಿವೃದ್ಧಿಗೆ ಆದ್ಯತೆ

ಯಳಂದೂರು: ಕೊಳ್ಳೇಗಾಲ ಕ್ಷೇತ್ರದ ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ತಾಲೂಕಿನ ವಡಗೆರೆ ಗ್ರಾಮದಲ್ಲಿ ಶನಿವಾರ ಒಕ್ಕಲಿಗ ಸಮುದಾಯ ಭವನ ಕಟ್ಟಡ, ರಸ್ತೆ, ಚರಂಡಿ ಹಾಗೂ ಪರಿಶಿಷ್ಟ ಜಾತಿ ಬಡಾವಣೆಯ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಚಾಮರಾಜನಗರ ಜಿಲ್ಲೆ ಹೆಚ್ಚು ಕೆರೆ, ಕಟ್ಟೆಗಳಿಂದ ಕೂಡಿದ್ದು, ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಿಲ್ಲೆಗೆ ಆಮಂತ್ರಿಸಿ ಸಭೆ ಕರೆದು ಹೆಚ್ಚಿನ ಅನುದಾನಕ್ಕೆ ಮನವಿ ಮಾಡಲಾಗುವುದು. ಮುಖ್ಯಮಂತ್ರಿಗಳ ವಿಶೇಷ ಯೋಜನೆಯಲ್ಲಿ 25 ಕೋಟಿಗಳ ಅನುದಾನವನ್ನು ನೀಡಿದ್ದು, ಇದರಲ್ಲಿ ಕ್ಷೇತ್ರದ ಪರಿಶಿಷ್ಟ ಜಾತಿ, ಪಂಗಡ, ಉಪ್ಪಾರ, ಕುರುಬರು, ಒಕ್ಕಲಿಗರು, ಮುಸ್ಲಿಂ, ಕ್ರೈಸ್ತರು, ಬೌದ್ಧರು, ಸೇರಿದಂತೆ ಪ್ರತಿಯೊಂದು ಸಮುದಾಯದ ಭವನಗಳು, ಬಡಾವಣೆಯಗಳ ರಸ್ತೆ, ಚರಂಡಿ, ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಮಾಜಿ. ಜಿ.ಪಂ. ಸದಸ್ಯ ವಡಗೆರೆ ದಾಸ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ 57 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದ್ದು, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಕೂಡ ಹೆಚ್ಚಿನ ಅನುದಾನ ನೀಡಿದೆ. ವಿರೋಧ ಪಕ್ಷಗಳ ಅಪಪ್ರಚಾರಗಳಿಗೆ ಯಾರು ಕಿವಿಕೂಡಬೇಡಿ ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಜಿ.ಪಂ.ಮಾಜಿ ಸದಸ್ಯ ಜೆ.ಯೋಗೇಶ್, ವಡಗೆರೆ ದಾಸ್, ಕೆಆರ್‌ಐಡಿಎಲ್ ಎಇಇ ಚಿಕ್ಕಲಿಂಗಯ್ಯ, ನಿರ್ಮಿತಿ ಜೆಇ ನಂದೀಶ್, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಮುಖಂಡ ತೋಟೇಶ್, ಡೇರಿ ಬಸವರಾಜು, ಜೈಲಿಂಗ, ವಡಗೆರೆ ರೇವಣ್ಣ, ಕಂದಹಳ್ಳಿ ನಂಜುಂಡಸ್ವಾಮಿ, ಗಣಿಗನೂರು ಬಂಗರಸ್ವಾಮಿ, ಯೋಗನಂದ, ಬಂಗಾರು, ಗೌಡಹಳ್ಳಿ ರಾಜೇಶ್ ಇತರರು ಇದ್ದರು.