ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ 
ಜಿಲ್ಲೆ

ಕೊಳೆಯಿಂದ ನಷ್ಟವಾದ ಬೆಳೆಗೆ ಪರಿಹಾರ ನೀಡಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಕಾಫಿ, ಮೆಣಸು ಮತ್ತು ಅಡಕೆ ಬೆಳೆಗಳಿಗೆ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಫಿ ಬೆಳೆಯುವ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಮೇ ಮತ್ತು ಜೂನ್ ತಿಂಗಳಿನಿAದ ನಿರಂತರವಾಗಿ ಸುರಿದ ಮಳೆಯಿಂದ ಕಾಫಿ ತೋಟದಲ್ಲಿ ಅಪಾರ ಪ್ರಮಾಣದಲ್ಲಿ ಕಾಫಿ ಫಸಲು ನಷ್ಟವಾಗಿದೆ. ಈ ಕುರಿತು ಕಾಫಿ ಮಂಡಳಿಯ ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ. ಆದರೆ ಬಳಿಕವೂ ಮಳೆ ಮುಂದುವರೆದಿದ್ದು, ಅಧಿಕ ತೇವಾಂಶ, ಗಾಳಿ, ಮಳೆ ಕಾಫಿ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ ಎಂದು ತಿಳಿಸಿದರು.

ಕಾಫಿಮಂಡಳಿ, ಕಂದಾಯ ಇಲಾಖೆ, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ಮತ್ತೊಮ್ಮೆ ಬೆಳೆನಷ್ಟ ಕುರಿತು ಮತ್ತೊಮ್ಮೆ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಬೇಕು ಎಂದರು.

ಸರ್ಕಾರ ಅಧಿಕಾರಿಗಳಿಂದ ವರದಿಪಡೆದು ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ನೆರವಿಗೆ ಧಾವಿಸಬೇಕು. ರಾಷ್ಟç ಮತ್ತು ರಾಜ್ಯ ವಿಪತ್ತು ಯೋಜನೆಯಡಿ ಸೂಕ್ತ ಪರಿಹಾರ ದೊರಕಿಸಿಕೊಡಬೇಕು. ಕಾಫಿ ಫಸಲು ನಷ್ಟವಾಗಿರುವ ಕುರಿತು ಸಂಬAಧಿಸಿದ ಇಲಾಖೆ ಅಧಿಕಾರಿಗಳು, ಕಾಫಿ ಮಂಡಳಿ ಅಧ್ಯಕ್ಷರ ಗಮನಕ್ಕೂ ತರಲಾಗಿದೆ ಎಂದರು.

ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ರತೀಶ್‌ಕುಮಾರ್ ಮಾತನಾಡಿ, ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಅಧಿಕಗೊಂಡಿದ್ದು, ತೋಟಗಳನ್ನೆ ತಮ್ಮ ಆವಾಸಸ್ಥಾನವನ್ನಾಗಿ ಮಾಡಿಕೊಂಡಿವೆ. ಕಾಫಿ, ಮೆಣಸು, ಅಡಕೆ ಬೆಳೆಗಳನ್ನು ನಾಶಪಡಿಸುತ್ತಿದ್ದು, ಬೆಳೆಗಾರರು ಮತ್ತು ರೈತರು ನಷ್ಟ ಅನುಭವಿಸುವಂತಾಗಿದೆ. ಕಾಡುಪ್ರಾಣಿಗಳ ಹಾವಳಿಯಿಂದ ಕಾರ್ಮಿಕರು ಕೂಲಿ ಕೆಲಸಕ್ಕೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.

ತೋಟಗಳಲ್ಲಿ ರಸಗೊಬ್ಬರ ಬಳಕೆ ಮುಖ್ಯವಾಗಿದೆ. ಯೂರಿಯಾ ಗೊಬ್ಬರ ಅಗತ್ಯವಾಗಿ ಬೇಕಾಗಿದ್ದು, ಈ ಗೊಬ್ಬರದ ಕೊರತೆ ಉಂಟಾಗಿದೆ. ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಿ ೫ ಎಕರೆಗೆ ಕನಿಷ್ಟ ೮ ಮೂಟೆ ಯೂರಿಯಾ ರಸಗೊಬ್ಬರವನ್ನು ಕೊಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಬೆಳೆಗಾರರ ಸಂಘದ ಪ್ರಧಾನಕಾರ್ಯದರ್ಶಿ ಕೆರೆಮಕ್ಕಿ ಮಹೇಶ್ ಮಾತನಾಡಿ, ಮಲೆನಾಡು ಭಾಗದಲ್ಲಿ ಓಡಾಡುತ್ತಿರುವ ಕಾಡಾನೆಗಳನ್ನು ಭದ್ರಾಅಭಯಾರಣ್ಯ ಅಥವಾ ನಾಗರಹೊಳೆ ಅಭಯಾರಣ್ಯಕ್ಕೆ ಸೇರಿಸಿ ಸುತ್ತಲು ಟೆಂಟಿಕಲ್ ಫೆನ್ಸಿಂಗ್ ಅಥವಾ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಮೂಲಕ ಬೆಳೆ ನಾಶವಾಗದಂತೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಫಿ ಬೆಳೆಗಾರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ಪಿ.ಸುರೇಂದ್ರ, ಕೆಜಿಎಫ್ ಮತ್ತು ಬೆಳೆಗಾರ ಸಂಘದ ಮುಖಂಡರಾದ ಸಿ.ಸುರೇಶ್, ಬಿ.ಆರ್.ಬಾಲಕೃಷ್ಣ, ಅಶೋಕ್ ಸೂರಪ್ಪನಹಳ್ಳಿ ಇದ್ದರು.