ಹೊಳೆನರಸೀಪುರ: ತಾಲೂಕಿನ ಲಕ್ಷ್ಮೀಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಗರ್ಭಿಣಿಯರು, ಬಾಣಂತಿಯರು ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಣೆಯಾಗಿದ್ದು, ಮೊಟ್ಟೆ ಪೂರೈಕೆ ಮಾಡಿದವರ ವಿರುದ್ಧ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದರು.
ಅಂಗನವಾಡಿ ಕೇಂದ್ರದಲ್ಲಿ ನೀಡಿದ್ದ ಮೊಟ್ಟೆಗಳನ್ನು ಪಡೆದು ಮನೆಯಲ್ಲಿ ಬೇಯಿಸಿ ಸಿಪ್ಪೆ ಸುಲಿದಾಗ ಮೊಟ್ಟೆಗಳು ಹಾಳಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅಂಗನವಾಡಿ ಕೇಂದ್ರಕ್ಕೆ ಬಂದ ಫಲಾನುಭವಿಗಳು, ಮೊಟ್ಟೆ ಪೂರೈಕೆ ಮಾಡುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗುತ್ತಿದಾರನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಹಳೆಯ ಹಾಗೂ ಕಳಪೆ ಮೊಟ್ಟೆಗಳನ್ನು ವಿತರಣೆ ಮಾಡುತ್ತಿದ್ದಾರೆ. ಒಂದು ವೇಳೆ ಮಕ್ಕಳು ಮೊಟ್ಟೆ ತಿಂದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಕೂಡಲೇ ಮೊಟ್ಟೆ ಪೂರೈಕೆ ಮಾಡುತ್ತಿರುವ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಬೇಕು. ಆತನನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಗುಣಮಟ್ಟದ ಪದಾರ್ಥಗಳು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಗುತ್ತಿಗೆದಾರನೊಂದಿಗೆ ಅಧಿಕಾರಿಗಳು ಶಾಮೀಲಾಗಿ ಮೊಟ್ಟೆಗಳನ್ನು ಪರಿಶೀಲನೆ ಮಾಡದೆ ವಿತರಣೆ ಮಾಡಿಸುತ್ತಿದ್ದಾರೆ. ಕೂಡಲೇ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.