ಸಿದ್ದಾಪುರ: ಜಿಲ್ಲೆಯ ಆರ್ಥಿಕ ಬೆಳೆಯಾದ ಅಡಕೆಗೆ ರೋಗ ಹರಡದಂತೆ ಬೆಳೆಗಾರರು ಅಡಕೆ ಕೊಳೆ ನಿಯಂತ್ರಣ ದ್ರಾವಣ ಸಿಂಪಡಣೆಗೆ ಮುಂದಾಗಿದ್ದಾರೆ.
ಕಳೆದ ಐದಾರು ವರ್ಷದಿಂದ ಅಡಕೆ ಕೊಳೆಯಿಂದ ಕಂಗೆಟ್ಟು ಹೋಗಿದ್ದ ಬೆಳೆಗಾರರು ಮುಂಜಾಗ್ರತೆಯಾಗಿ ರೋಗ ನಿಯಂತ್ರಣಕ್ಕೆ ಸಿದ್ಧತೆ ಕೈಗೊಂಡಿದ್ದಾರೆ. ಅಡಕೆ ಕೊಳೆಯಿಂದ ಶೇ. 70ರಷ್ಟು ಬೆಳೆಗಾರರು ಮೂರು ವರ್ಷದಿಂದ
ಶೇ. 40ರಿಂದ 50ರಷ್ಟು ಬೆಳೆಗೆ ಮಾತ್ರ ತೃಪ್ತಿಪಡುವಂತಾಗಿದ್ದು, ಇನ್ನುಳಿದ ಬೆಳೆ ಕೊಳೆ ಹಾಗೂ ಗಾಳಿ-ಮಳೆಗೆ ಹಾನಿಯಾಗುತ್ತಿದೆ. ಹೀಗಾಗಿ ರೈತರು ಈ ವರ್ಷ ಮೇ ತಿಂಗಳ ಎರಡನೇ ವಾರದಿಂದಲೇ ಕೊಳೆ ರೋಗ ನಿಯಂತ್ರಿಸುವ ಬೈಯೋಪೈಟ್, ಬಯೋಕ್ಲಿಯರ್, ಬಯೋಪಾಸ್, ಮಲ್ಟಿಕ್ಲಿಯರ್, ಮಂಗಳ, ಸುರಕ್ಷಾ ಸೇರಿ ಮತ್ತಿತರ ದ್ರಾವಣ ಸಿಂಪಡಿಸಿದ್ದಾರೆ. ಈಗ ಬೋಡೋ ದ್ರಾವಣ ಸಿಂಪಡಣೆ ಮಾಡುತ್ತಿದ್ದಾರೆ. ಈಗಾಗಲೇ ಕೆಲವು ಬೆಳೆಗಾರರು ಎರಡನೇ ಹಂತದ ಕೊಳೆನಾಶಕ ಸಿಂಪಡಣೆ ಮಾಡುತ್ತಿದ್ದಾರೆ. ಕೊಳೆ ನಿಯಂತ್ರಣಕ್ಕಾಗಿ ಕೆಲವು ಬೆಳೆಗಾರರು ಅಡಕೆ ಕೊನೆಗೆ ಪ್ಲಾಸ್ಟಿಕ್ ಕೊಟ್ಟೆ ಕಟ್ಟಿದ್ದಾರೆ.
ಹವಾಮಾನ ಇಲಾಖೆಯ ಮಾಹಿತಿಯಂತೆ ಈ ವರ್ಷವೂ ಗಾಳಿ-ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುವ ಸೂಚನೆ ಇರುವುದರಿಂದ ಅಡಕೆ ಬೆಳೆಗಾರರಿಗೆ ಆತಂಕ ಎದುರಾಗಿದೆ. ಮೂರ್ನಾಲ್ಕು ದಿನದಿಂದ ಆಗಾಗ ಬಿಸಿಲು-ಮಳೆ ಕಾಣಿಸಿಕೊಳ್ಳುತ್ತಿರುವುದರಿಂದ ಕೊಳೆ ರೋಗ ಬರಲು ಇದು ಸಕಾಲ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಅಡಕೆ ಬೆಳೆಯನ್ನೇ ನಂಬಿ ಜೀವನ ನಡೆಸುವುದರಿಂದ ಹಾಗೂ ಆರ್ಥಿಕ ಬೆಳೆ ಅಡಕೆ ಆಗಿರುವುದರಿಂದ ಅದನ್ನು ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬ ಬೆಳೆಗಾರನ ಕರ್ತವ್ಯ. ಆದ್ದರಿಂದ ಮುಂಜಾಗ್ರತೆಯಾಗಿ ಅಡಕೆ ಕೊಳೆ ನಿಯಂತ್ರಣ ದ್ರಾವಣ ಸಿಂಪಡಿಸುವುದು ಅನಿವಾರ್ಯವಾಗಿದೆ. ಆದರೆ, ರಾಜ್ಯ ಸರ್ಕಾರ ಮೈಲು ತುತ್ತಕ್ಕೆ ಬಿಡುಗಡೆ ಮಾಡಬೇಕಾದ ಅನುದಾನವನ್ನು ಇನ್ನೂ ಬಿಡುಗಡೆ ಮಾಡಿಲ್ಲ.| ಶ್ರೀಧರ ಹೆಗಡೆ ಸುಳಗಾರ ಅಡಕೆ ಕೃಷಿಕ
ಮೈಲು ತುತ್ತಕ್ಕೆ ಈವರೆಗೆ ಯಾವುದೇ ಅನುದಾನ ಬಂದಿಲ್ಲ. ತಾಲೂಕಿನ ಅಲ್ಲಲ್ಲಿ ಅಡಕೆಗೆ ಕೊಳೆ ರೋಗ ಕಾಣಿಸಿಕೊಂಡಿದೆ ಎನ್ನುವ ಮಾಹಿತಿ ಇದೆ. ತಾಲೂಕಿನಲ್ಲಿ ಈಗಾಗಲೇ ಶೇ. 50ರಷ್ಟು ಬೆಳೆಗಾರರು ಅಡಕೆ ಕೊಳೆ ನಿಯಂತ್ರಣಕ್ಕೆ ಬೋಡೋ ದ್ರಾವಣ ಸೇರಿ ವಿವಿಧ ರೋಗ ನಾಶಕ ದ್ರಾವಣ ಸಿಂಪಡಿಸಿ ಮುಂಜಾಗ್ರತೆ ವಹಿಸಿದ್ದಾರೆ.| ಎಚ್.ಜಿ. ಅರುಣತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ, ಸಿದ್ದಾಪುರ