ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿಗಿಂತ ಹೆಚ್ಚು ಮಳೆಯಾಗಿದೆ. ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಕೊಳೆ ರೋಗ ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆಯ ಹಾರ್ಟಿ ಕ್ಲಿನಿಕ್ ವಿಷಯ ತಜ್ಞ ವಿ.ಎಂ. ಹೆಗಡೆ ರೈತರಿಗೆ ಸಲಹೆ ನೀಡಿದ್ದಾರೆ.
ಅಡಕೆ, ಕಾಳು ಮೆಣಸು ಮತ್ತು ಶುಂಠಿ ಬೆಳೆಗಳಲ್ಲಿ ಹಲವಾರು ಕಡೆ ಕೊಳೆ ರೋಗ ಕಾಣಿಸಿಕೊಂಡಿದೆ. ಆದರೆ, ಮಳೆಗಾಲ ಇನ್ನೂ 30-40 ದಿನಗಳ ಕಾಲ ಇರುವುದರಿಂದ, ಕೊಳೆ ರೋಗಕ್ಕೆ ಪೂರಕ ವಾತಾವರಣ ಉಂಟಾಗುವ ಸಾಧ್ಯತೆ ಇದೆ. ಈಗಾಗಲೇ ಕೊಳೆ ರೋಗ ಬಂದಿರುವ ತೋಟಗಳಲ್ಲಿ ರೋಗ ಉಲ್ಭಣವಾಗುವ ಸಾಧ್ಯತೆ ಇದೆ. ಹಾಗಾಗಿ ಅಡಕೆ, ಕೊಕೋ, ಕಾಳು ಮೆಣಸಿನ ಕೊಳೆ ರೋಗ ನಿಯಂತ್ರಣಕ್ಕೆ ಶೇಕಡಾ ಒಂದರ ಬೋಡೋ ದ್ರಾವಣ ಸಿಂಪಡಿಸಬೇಕು. ಕಾಯಿ ಕೊಳೆ ರೋಗ ಪೀಡಿತ ತೋಟದ ಅಡಕೆ ಮರದ ಗೊನೆಗಳಿಗೆ ಮತ್ತು ಕೆಳ ಭಾಗದ ಮೂರ್ನಾಲ್ಕು ಹೆಡಗಳಿಗೆ ಮೆಟಾಲಾಕ್ಸಿಲ್ 35 ಡಬ್ಲ್ಯುಎಸ್ 1ಗ್ರಾಂ ಅಥವಾ ಮೆಟಾಲಾಕ್ಸಿಲ್ ಎಂ.ಜೆಡ್. 2ಗ್ರಾಂ ಪ್ರತಿ ಲೀಟರ ನೀರಿಗೆ ಬೆರೆಸಿದ ದ್ರಾವಣವನ್ನು ಮಳೆ ಬಿಡುವಿದ್ದಾಗ ಮಾತ್ರ ಸಿಂಪಡಿಸಬೇಕು.
ಕೊಳೆ ರೋಗದಿಂದ ಉದುರಿದ ಕಾಯಿಗಳನ್ನು ಮತ್ತು ಸತ್ತ ಅಡಿಕೆ ಮರದ ಚಂಡೆ ಮತ್ತು ಸಿಂಗಾರಗಳನ್ನು ತೋಟದಿಂದ ಹೊರ ಹಾಕಬೇಕು. ಕಾಳು ಮೆಣಸಿನ ಬುಡ ಕೊಳೆ ರೋಗಕ್ಕೆ ಕಾಪರ್ ಆಕ್ಸಿಕ್ಲೋರೈಡ್ ಶೀಲೀಂದ್ರ ನಾಶಕವನ್ನು 5 ಗಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು. ರೋಗ ಪ್ರಾರಂಭವಾಗಿದ್ದಲ್ಲಿ, ಮಳೆ ಬಿಡುವಿದ್ದಾಗ ಮೆಟಾಲಾಕ್ಸಿಲ್ 35 ಡಬ್ಲ್ಯುಎಸ್ 1ಗ್ರಾಂ ಅಥವಾ ಮೆಟಾಲಾಕ್ಸಿಲ್ ಎಂ.ಜೆಡ್. 2ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣ ಸಿಂಪಡಿಸಬೇಕು. ಬಳ್ಳಿಯ ಬುಡಕ್ಕೆ 2-3 ಲೀಟರ್ ದ್ರಾವಣವನ್ನು ಮಳೆ ಬಿಡುವಿದ್ದಾಗ ಹಾಕಬೇಕು. ನಂತರ ಶೇ.1ರ ಬೋಡೋ ದ್ರಾವಣವನ್ನು ಸಿಂಪಡಿಸಬೇಕು
ಶುಂಠಿಯ ಗಡ್ಡೆ ಕೊಳೆ ನಿಯಂತ್ರಣಕ್ಕಾಗಿ ಕಾಪರ ಆಕ್ಸಿಕ್ಲೋರೈಡ್ ಶೀಲೀಂದ್ರ ನಾಶಕವನ್ನು 3ಗಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು. ರೋಗ ಪ್ರಾರಂಭವಾಗಿದ್ದಲ್ಲಿ ಮೆಟಾಲಾಕ್ಸಿಲ್ ಅಥವಾ ಸೈಮಾಕ್ಷಿನಿಲ್ ಎಂ.ಜೆಡ್. 2ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣ ಹಾಕಬೇಕು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಶಿರಸಿಯ ಹಾರ್ಟಿ ಕ್ಲಿನಿಕ್ ಅಥವಾ ಆಯಾ ತಾಲೂಕಿನ ತೋಟಗಾರಿಕೆ ಅಧಿಕಾರಿಗಳನ್ನು ಸಂರ್ಪಸಲು ಕೋರಿದ್ದಾರೆ.