ಚಿಕ್ಕನಾಯಕನಹಳ್ಳಿ: ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಮನೆ ಮನೆಗೆ ಕೊಳಾಯಿ ಹಾಕಲುಕೇಂದ್ರ ಸರ್ಕಾರದ ಅಮೃತ್ ಜಲ್ ಯೋಜನೆಯಡಿ 70 ಕೋಟಿ ರೂ. ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಕೇದಿಗೆಹಳ್ಳಿ ಬಳಿ ಸೋಮವಾರ ವಿವಿಧ ರಸ್ತೆ, ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಒಳಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ಪಟ್ಟಣದ ರಸ್ತೆಗಳು ಹಾಳಾಗಿದ್ದು, ಅವುಗಳನ್ನು ಸರಿಪಡಿಸುವಂತೆ ಈಗಾಗಲೇ ಒಳಚರಂಡಿ ಇಂಜನಿಯರ್ಗೆ ಸೂಚನೆ ನೀಡಲಾಗಿದೆ. ಪುರಸಭೆಯ 90 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ 16 ವಾರ್ಡ್ಗಳಲ್ಲಿ ಸಿಸಿ ರಸ್ತೆ, ಚರಂಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಮಂಜುಳಮ್ಮ ಮಾತನಾಡಿ, ನಗರೋತ್ಥಾನದ 4ನೇ ಹಂತದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದವರು ವಾಸಿಸುವಂತಹ ಪ್ರದೇಶಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಒಟ್ಟು 90 ಲಕ್ಷ ರೂ. ವೆಚ್ಚದಲ್ಲಿ ಈ ಯೋಜನೆಯ ಕಾಮಗಾರಿ ನಡೆಯಲಿದೆ ಎಂದರು. ಮುಖಂಡರಾದ ಉಮಾಪರಮೇಶ್, ಲ್ಮಪಾಂಡುರಂಗಯ್ಯ, ಮಮತಾ ದೃವಕುಮಾರ್, ರೇಣುಕಾ ಗುರುಮೂರ್ತಿ ಇತರರು ಇದ್ದರು.