ಜಿಲ್ಲೆ

ಕೊಳವೆಬಾವಿ ಕೊರೆಸುವ ಕೆಲಸ ಪ್ರಗತಿ ಕಂಡಿಲ್ಲ

ಮೈಸೂರು: ಕಳೆದ ವರ್ಷ ಮಂಜೂರಾಗಿರುವ ಕೊಳವೆಬಾವಿ ಕೊರೆಸುವ ಕೆಲಸದಲ್ಲಿ ಶೇ.50 ರಷ್ಟೂ ಪ್ರಗತಿಯಾಗಿಲ್ಲ. ಹೀಗಾದರೆ, ಈ ಕೆಲಸವನ್ನು ಯಾವಾಗ ಮಾಡುತ್ತೀರಿ. ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್.ತಂಗಡಗಿ ಅಸಮಾಧಾನವ್ಯಕ್ತಪಡಿಸಿದರು.


ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸೋಮವಾರ ಮಧ್ಯಾಹ್ನ ಆಯೋಜಿಸಿದ್ದ ಮೈಸೂರು ವಿಭಾಗೀಯ ಮಟ್ಟದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.


ಆಯಾ ವರ್ಷದ ಕೆಲಸ ಆಯಾ ವರ್ಷದಲ್ಲೇ ಆಗಬೇಕು. ಆದರೆ, ಮೈಸೂರು ವಿಭಾಗದ ಬಹುತೇಕ ಜಿಲ್ಲೆಗಳಲ್ಲಿ ಈ ಕೆಲಸವಾಗಿಲ್ಲ. ಇನ್ನೂ ಕೆಲಸವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಒಂದು ವರ್ಷದ ಯೋಜನೆ ಮತ್ತೊಂದು ವರ್ಷದಲ್ಲಿ ಆಗುವಂತಾಗಬಾರದು. ಇದು ಸರಿಯಲ್ಲ. ಆಯಾ ವರ್ಷದಲ್ಲೇ ಅದು ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.


2023-24ನೇ ಆರ್ಥಿಕ ವರ್ಷದಲ್ಲಿ ಬಿಡುಗಡೆಯಾಗಿರುವ ಅನುದಾನವನ್ನು ಡಿಸೆಂಬರ್ ಅಂತ್ಯದೊಳಗೆ ಬಳಕೆ ಮಾಡಿ ಶೇ.100 ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಗಡುವು ನೀಡಿದರು. ಹೊಸ ಬೇಡಿಕೆಗಳಿಗೆ ಶೀಘ್ರ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು.


ಅಧಿಕಾರಿಗಳ ವಿರುದ್ಧ ಕ್ರಮ: ನೇರ ಸಾಲ ಹಾಗೂ ಗಂಗಾ ಕಲ್ಯಾಣ ಯೋಜನೆ ಜಾರಿಯಲ್ಲಿ ಮಧ್ಯವರ್ತಿಗಳ ಹಾವಳಿ ಕಂಡು ಬಂದರೆ ಅಧಿಕಾರಿಗಳನ್ನು ನೇರ ಹೊಣೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸ್ವಯಂ ಉದ್ಯೋಗ, ನೇರ ಸಾಲ ಯೋಜನೆಯ ಸಾಲದ ಮೊತ್ತ 50 ಸಾವಿರ ರೂ.ನಿಂದ 2 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಈ ಕುರಿತು ಫಲಾನುಭವಿಗಳಿಗೆ ಸೂಕ್ತ ಮಾಹಿತಿ ನೀಡಿ ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲಿ ಹೆಚ್ಚಳ ಮಾಡಬೇಕು ಎಂದು ನಿರ್ದೇಶಿಸಿದರು.


ಹಾಗೆಯೇ ಗಂಗಾ ಕಲ್ಯಾಣ ಯೋಜನೆಯ ಘಟಕ ವೆಚ್ಚವನ್ನು 2 ಲಕ್ಷ ರೂ. ಯಿಂದ 3.75 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. ಇದರಿಂದ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಸಹಾಯಧನದ ಮೊತ್ತ 3.25 ಲಕ್ಷ ರೂ., ಸಾಲ 50 ಸಾವಿರ ರೂ. ದೊರೆಯಲಿದೆ ಎಂದು ತಿಳಿಸಿದರು.


ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುವುದು. ದಕ್ಷಿಣ ಕನ್ನಡ ಸೇರಿದಂತೆ ಮೈಸೂರು, ಚಾಮರಾಜನಗರ ವಿವಿಧ ಜಿಲ್ಲೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡಬೇಕಿದೆ. ಅದಕ್ಕಾಗಿ ಮುಖ್ಯಮಂತ್ರಿಯೊಂದಿಗೆ ಸಮಾಲೋಚಿಸಿ ಕ್ರಮ ವಹಿಸಲಾಗುವುದು ಎಂದರು.


ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಇಲಾಖೆಯ ಕಾರ್ಯಕ್ರಮಗಳ ಪ್ರಚಾರಕ್ಕೆ ಒತ್ತು ನೀಡಬೇಕು. ಒಂದು ವಾರದೊಳಗೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಹೋರ್ಡಿಂಗ್ ಅಳವಡಿಸಲು ನಿರ್ಧರಿಸಲಾಗುವುದು. ಪ್ರಚಾರವನ್ನು ಮಾಧ್ಯಮಗಳಿಗೆ ಸೀಮಿತ ಮಾಡಬೇಕಿಲ್ಲ ಎಂದು ತಿಳಿಸಿದರು.


ಹಾಸ್ಟೆಲ್‌ಗಳಿಗೆ ಪ್ರವೇಶ ನೀಡುವ ವೇಳೆ ಶಾಸಕರು ಶಿಫಾರಸು ಮಾಡಿದವರಿಗೆ ಪ್ರವೇಶ ನೀಡಬೇಕು. ಇಲ್ಲದಿದ್ದರೆ ನಮ್ಮ ಮೇಲೆ ಒತ್ತಡ ತರುತ್ತಾರೆ. ಪ್ರಗತಿಯಲ್ಲಿರುವ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ನಿವೇಶನ ಇದ್ದರೆ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆದೇಶಿಸಿದರು.

ಇಲಾಖೆ ಕಾರ್ಯದರ್ಶಿ ತುಳಸಿ ಮದ್ದಿನೆನಿ, ಜಂಟಿ ನಿರ್ದೇಶಕ ಡಾ.ಸಿ.ಕೆ.ಜಗದೀಶ್‌ಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಜಿ.ಎಸ್.ಮಧುಸೂದನ ರೆಡ್ಡಿ ಹಾಜರಿದ್ದರು.

ಕಲ್ಲುಬಂಡೆ ಮೇಲೆ ಹಾಸ್ಟೆಲ್!

ಚಾಮರಾಜನಗರ ಜಿಲ್ಲೆಯಲ್ಲಿ ಕಲ್ಲುಬಂಡೆ ಮೇಲೆ ಹಾಸ್ಟೆಲ್ ಕಟ್ಟಡ ನಿರ್ಮಿಸಿರುವುದು ಆಶ್ಚರ್ಯ ಮತ್ತು ವಿಚಿತ್ರ ಎನಿಸಿದೆ ಎಂದು ಸಚಿವ ಶಿವರಾಜ್ ಹೇಳಿದರು.
ಕಟ್ಟಡ ನಿರ್ಮಾಣವಾಗಿದ್ದರೂ ಬಳಕೆಯಾಗುತ್ತಿಲ್ಲ. ಯುಜಿಡಿ ಪೈಪ್‌ಲೈನ್ ಕೆಲಸಕ್ಕೆ ಕಲ್ಲುಬಂಡೆ ಅಡ್ಡಿಯಾಗಿದೆ. ಹಾಗಾದರೆ ಹೇಗೆ ಕಟ್ಟಡ ನಿರ್ಮಿಸಲಾಗಿದೆ. ಹಿಂದಿನವರು ಮಾಡಿದ ತಪ್ಪಿನಿಂದ ಹೀಗೆ ಆಗಿದೆ. ಮೇಲ್ಭಾಗದಲ್ಲಿ ಪೈಪ್‌ಲೈನ್ ಅಳವಡಿಕೆ ಮಾಡಬೇಕು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚಿಸಿದರು.

ದ.ಕ.ಜಿಲ್ಲೆಯವರಿಗೆ ಆಸಕ್ತಿ ಇಲ್ಲವೇ?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆಯುತ್ತಿರುವ ಸೇನಾ ಶಾಲೆಗೆ ಉತ್ತರ ಕರ್ನಾಟಕದ ಭಾಗದ ಹೆಚ್ಚಿನ ಅಭ್ಯರ್ಥಿಗಳು ಭಾಗವಹಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಆಸಕ್ತಿ ಇಲ್ಲವೇ? ಎಂದು ಸಚಿವರು ಪ್ರಶ್ನಿಸಿದರು.


ದ.ಕ ಜಿಲ್ಲೆಯವರು ಶೇ.10 ಅಭ್ಯರ್ಥಿಗಳಷ್ಟೇ ಭಾಗವಹಿಸುತ್ತಾರೆ. ಜತೆಗೆ, ಈ ಶಾಲೆಯ 80ಕ್ಕೂ ಹೆಚ್ಚು ಯುವಕರು ಸೇನೆಗೆ ನೇಮಕಗೊಂಡಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದರು.


ಸೇನಾ ಶಾಲೆಯ ವಿಡಿಯೋ ತುಣುಕನ್ನು ವೀಕ್ಷಿಸಿದ ಸಚಿವರು, ಈ ಸೇನಾ ಶಾಲೆ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯವರು ಪೊಲೀಸ್ ಇಲಾಖೆಗೆ ಸೇರುವುದಿಲ್ಲ. ಈ ಜಿಲ್ಲೆಯಲ್ಲಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಎಲ್ಲ ಠಾಣೆಗಳನ್ನು ಖಾಲಿ ಮಾಡಬೇಕಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದನ್ನು ಸಭೆಯಲ್ಲಿ ನೆನಪಿಸಿಕೊಂಡರು.