ಜಿಲ್ಲೆ

ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ

ಹಾಸನ: ಬಡ ಜನತೆಗೆ ಅನುಕೂಲವಾಗುವಂತೆ ಎಸ್.ಸಿ.ಪಿ.ಟಿ.ಎಸ್.ಪಿ ಯೋಜನೆಯಡಿ ಕೊರೆದಿರುವ ಕೊಳವೆ ಬಾವಿಗಳಿಗೆ ಆದ್ಯತೆ ಮೇರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮವಹಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕೆಲಸ ಮುಗಿದ ತಕ್ಷಣ ಬಿಲ್ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕೆರೆ ಕೋಡಿ ದುರಸ್ತಿಗೆ ನಿಗಾ ವಹಿಸಿ,ಅವುಗಳು ಸುಭದ್ರವಾಗಿರುವಂತೆ ಕಾಮಗಾರಿ ಮಾಡಬೇಕು. ಮಳೆ ಬಂದಾಗ ಯಾವುದೇ ಹಾನಿಯಾಗದ ರೀತಿ ಕೆಲಸ ಮಾಡುವಂತೆ ತಿಳಿಸಿದರು.

ಚೆಕ್ ಡ್ಯಾಂ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಳೇಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮುಂದುವರೆದ ಕಾಮಗಾರಿಗಳ ಬಗ್ಗೆ ಕೂಡ ಗಮನಹರಿಸಲು ಸೂಚಿಸಿದರು. ಕೆಲಸಗಳು ಏಕೆ ವಿಳಂಬವಾಗುತ್ತಿದೆ ಎಂಬುದರ ಬಗ್ಗೆ ಗಮನಹರಿಸಿ, ಸಮಸ್ಯೆಗಳನ್ನು ಸರಿಪಡಿಸಲು ಹೆಚ್ಚಿನ ಆಸಕ್ತಿವಹಿಸಿ ಕೆಲಸ ಶೀಘ್ರವೇ ಪೂರ್ಣಗೊಳಿಸಲು ಕ್ರಮವಹಿಸಿ ಎಂದು ಹೇಳಿದರು.

ಕಾಮಗಾರಿಗಳು ಮಂಜೂರು ಆದ ತಕ್ಷಣ ಟೆಂಡರ್ ಕರೆಯಬೇಕು ಕೆಲಸ ಪ್ರಾರಂಭ ಮಾಡುವುದನ್ನು ವಿಳಂಬ ಮಾಡದೆ, ಜನತೆಗೆ ಅನುಕೂಲವಾಗುವಂತೆ ಶೀಘ್ರವಾಗಿ ಕೆಲಸ ಪ್ರಾರಂಭಿಸಿ. ಈ ಬಾರಿ ಎಲ್ಲಾ ಕಡೆ ಉತ್ತಮ ಮಳೆಯಾಗಿದೆ. ಆದರೂ, ಕೆಲವು ಕೆರೆಗಳು ತುಂಬಿಲ್ಲ ಅದರ ಕಡೆ ಗಮನಹರಿಸಿ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.

ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಅವರು ಮಾತನಾಡಿ, ಬಹಳ ಕೆರೆಗಳು ಒತ್ತುವರಿ ಆಗಿವೆ. ಗ್ರಾಮಗಳಿಗೆ ಅನುಕೂಲವಾಗುವಂತೆ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿದರೆ ಜನತೆಗೆ ಸಹಕಾರಿ ಆಗುತ್ತದೆ ಎಂದರು.

ಅಟಲ್ ಭೂ ಜಲ್ ಯೋಜನೆ ನಿರ್ದೇಶಕ ಕಿರಣ್ ಮಸೂತಿ, ಮುಖ್ಯ ಅಭಿಯಂತ ಪ್ರಕಾಶ್ ಶ್ರೀಹರಿ, ಅಧಿಕ್ಷಕ ಅಭಿಯಂತರ ಪ್ರಶಾಂತ್ , ಕಾರ್ಯಪಾಲಕ ಅಭಿಯಂತರ ಟಿ.ಎನ್ ರಾಮಚಂದ್ರ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.