ಜಿಲ್ಲೆ

ಕೊಳಚೆ ನುಗ್ಗದಂತೆ ಕ್ರಮ, ಸಮಸ್ಯೆ ಪರಿಹಾರಕ್ಕೆ ಶಾಸಕ ಎಂ. ಕೃಷ್ಣಪ್ಪ ಸೂಚನೆ, ರಾಜಕಾಲು ಒತ್ತುವರಿಗೆ ತೆರವಿಗೆ ತಾಕೀತು

ಆನೇಕಲ್: ಹಾರಗದ್ದೆ ಗ್ರಾಪಂನ ವೀನಸ್ ಕೌಂಟಿ ಬಡಾವಣೆಗೆ ಕೊಳಚೆ ನೀರು ನುಗ್ಗಿ ಜನ ತೊಂದರೆಗೆ ಒಳಗಾಗಿರುವ ಬಗ್ಗೆ ಮಂಗಳವಾರ ವಿಜಯವಾಣಿಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೆಂಗಳೂರು ದಕ್ಷಿಣ ಶಾಸಕ ಎಂ. ಕೃಷ್ಣಪ್ಪ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ದ್ಯಾವಸಂದ್ರ ಕೆರೆ ಪ್ರದೇಶ ವೀಕ್ಷಿಸಿದ ಶಾಸಕರು, ಬಳಿಕ ಬಡಾವಣೆ ಪರಿಶೀಲಿಸಿ, ಸ್ಥಳೀಯರೊಂದಿಗೆ ಸಮಸ್ಯೆ ಕುರಿತು ಚರ್ಚಿಸಿದರು.

ಬಡಾವಣೆಗೆ ಜಿಗಣಿ ಕೈಗಾರಿಕಾ ಪ್ರದೇಶದ ನೀರು ಬರುತ್ತಿರುವುದು ಗಮನಕ್ಕೆ ಬಂದಿದೆ. ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರಾಜಕಾಲುವೆಯಲ್ಲಿ ತುಂಬಿರುವ ಹೂಳು ತೆಗೆದು, ಬಡಾವಣೆಗೆ ಕೊಳಚೆ ನುಗ್ಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಅಧಿಕಾರಿಗಳಿಗೆ ತರಾಟೆ: ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾದರೂ ಸ್ಥಳ ಪರಿಶೀಲಿಸದೆ ನಿರ್ಲಕ್ಷ್ಯವಹಿಸಿದ ಅಧಿಕಾರಿಗಳ ಕ್ರಮ ಸರಿಯಲ್ಲ ಎಂದು ಬೇಸರಿಸಿದ ಶಾಸಕರು, ಸ್ಥಳಕ್ಕೆ ಬಾರದ ಅಧಿಕಾರಿಗಳಿಗೆ ದೂರವಾಣಿ ಮೂಲಕವೇ ತರಾಟೆಗೆ ತೆಗೆದುಕೊಂಡರು.

ಒತ್ತುವರಿ ಮಾಡಿದರೆ ಕ್ರಮ: ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರು ಹರಿಯಲು ಇರುವ ರಾಜಕಾಲುವೆಯನ್ನು ಯಾರೇ ಒತ್ತುವರಿ ಮಾಡಿಕೊಂಡರೂ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಜತೆಗೆ ತೆರವುಗೊಳಿಸಲಾಗುವುದು ಎಂದ ಶಾಸಕರು, ಹಾರಗದ್ದೆಯ ಪಕ್ಕದಲ್ಲಿ ಖಾಸಗಿ ಕಂಪನಿಯವರು ರಾಜಕಾಲುವೆ ಒತ್ತುವರಿ ಮಾಡಿರುವ ಆರೋಪವಿದ್ದು, ಸ್ಥಳ ಪರಿಶೀಲಿಸಿ ತೆರವಿಗೆ ಸೂಚಿಸಿದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್ ಗೌಡ ಮಾತನಾಡಿ, ಸಮಸ್ಯೆ ಪರಿಹರಿಸಲು ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದ್ದು, ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಿ ಸ್ಥಳೀಯರ ಸಂಕಷ್ಟ ದೂರ ಮಾಡಬೇಕು ಎಂದರು.

ಆರ್‌ಐ ಮೋಹನ್,ಉಪ ತಹಸೀಲ್ದಾರ್ ಚಂದ್ರಶೇಖರ್, ಗ್ರಾಪಂ ಕಾರ್ಯದರ್ಶಿ ಶಶಿಕುಮಾರ್, ಕೆರೆ ಅಭಿವೃದ್ಧಿ ತಜ್ಞ ಆನಂದ್ ಹಾಜರಿದ್ದರು.

ವಿಜಯವಾಣಿ ಕಾರ್ಯಕ್ಕೆ ಮೆಚ್ಚುಗೆ: ಬಡಾವಣೆಯ ಸಮಸ್ಯೆ ಬಗ್ಗೆ ಅ.19ರಂದು ವಿಜಯವಾಣಿಯಲ್ಲಿ ‘ಬಡಾವಣೆಗೆ ನುಗ್ಗಿದ ಕೊಳಚೆ’ ಶೀರ್ಷಿಕೆಯಲ್ಲಿ ವಿಸ್ತೃತ ವರದಿಗೆ ಶಾಸಕರು ಸ್ಪಂದಿಸಿ, ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದ್ದು, ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು. ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.