ಜಿಲ್ಲೆ

ಕೊಳಗೇರಿ ವಸತಿ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸಿ

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಕೊಳಗೇರಿ ವಸತಿ ಪ್ರದೇಶಗಳಿಗೆ ಮೂಲ ಸೌಲಭ್ಯ ಒದಗಿಸುವಂತೆ ಶಾಸಕ ಜಿ.ಟಿ.ದೇವೇಗೌಡ ಸರ್ಕಾರಕ್ಕೆ ಮನವಿ ಮಾಡಿದರು.
ಸೋಮವಾರ ವಿಧಾನಸಭೆ ಅಧೀವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಬಡವರಿಗೆ, ನಿರ್ಗತಿಕರಿಗೆ ಸೂರು ಒದಗಿಸಿಕೊಟ್ಟು ಅವರ ಆಸೆಯನ್ನು ಪೂರೈಸುವಂತೆ ಸಿಎಂ ಅವರಿಗೆ ಮನವಿ ಮಾಡಿದರು.

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಂಚ್ಯಾ-ಸಾತಗಳ್ಳಿ, ಮಂಡಕಳ್ಳಿ, ರೂಪಾನಗರ (ಬೋಗಾದಿ), ಸಾತಗಳ್ಳಿ (ವಿಟಿಯು ಹಿಂಭಾಗ), ಕುಪ್ಪಲೂರು, ರಾಜೀವ್‌ನಗರ, ಏಕಲವ್ಯನಗರ ಹಾಗೂ ಕೆಸರೆಯಲ್ಲಿ ನಿರ್ಮಸಿರುವ 8 ಕೊಳಗೇರಿ ವಸತಿ ಪ್ರದೇಶಗಳಲ್ಲಿ 3,904 ಮನೆಗಳಿವೆ. 12,752 ಫಲಾನುಭವಿಗಳು ವಾಸ ಮಾಡುತ್ತಿದ್ದು, ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಒಳಚರಂಡಿ ವ್ಯವಸ್ಥೆ(ಯುಜಿಡಿ), ನೀರಿನ ಟ್ಯಾಂಕ್, ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು

ರೂಪಾನಗರ (ಬೋಗಾದಿ) ಹಾಗೂ ಕುಪ್ಪಲೂರು ಕೊಳಗೇರಿ ವಸತಿ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಿದ್ದು, ಇನ್ನುಳಿದ 6 ವಸತಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ಹಸ್ತಾಂತರಿಸುವಂತೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು, ಶೀಘ್ರದಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ನಿಮ್ಮನ್ನು ಕರೆದು ಸಭೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.