ಜಿಲ್ಲೆ

ಕೊಲೆಗೈದು ಪರಾರಿಯಾಗಿದ್ದ ಆರೋಪಿ ಬಂಧನ

ಕೊಳ್ಳೇಗಾಲ: ಪತ್ನಿ ಜತೆಗಿನ ಅನೈತಿಕ ಸಂಬಂಧವನ್ನು ಬಿಡುವಂತೆ ಜಗಳವಾಡಿದ ಕಾರಣಕ್ಕೆ ಆಕೆಯ ಪತಿಯನ್ನೇ ಕೊಲೆಗೈದಿದ್ದ ಯುವಕನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ತಾಲೂಕಿನ ಮಧುವನಹಳ್ಳಿ ಗ್ರಾಮದ ಜಿ.ವಿ.ಗೌಡ ಬಡಾವಣೆಯ ನಿವಾಸಿ ಮಹದೇವಸ್ವಾಮಿ (45) ಕೊಲೆಯಾಗಿದ್ದ ವ್ಯಕ್ತಿ. ಅದೇ ಗ್ರಾಮದ ಹೊಸ ಬಡವಾಣೆಯ ರವಿರಾಜ್(30) ಬಂಧಿತ ಆರೋಪಿ.
ಮಧುವನಹಳ್ಳಿ ಗ್ರಾಮದ ಜಿ.ವಿ.ಗೌಡ ಬಡಾವಣೆಯಲ್ಲಿ ಮಹದೇವಸ್ವಾಮಿ, ಪತ್ನಿ ಮಂಜುಳಾ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ಜೀವನಕ್ಕಾಗಿ ಮಹದೇವಸ್ವಾಮಿ ಚಿಲ್ಲರೆ ಅಂಗಡಿ ನಡೆಸುತ್ತಿದ್ದ. ಆದರೆ ಕಳೆದ ಎರಡು ವರ್ಷಗಳಿಂದ ಮಂಜುಳಾಗೂ ಅದೇ ಗ್ರಾಮದ ರವಿರಾಜ್ ಎಂಬ ಯುವಕನಿಗೂ ಅಕ್ರಮ ಸಂಬಂಧ ಬೆಳೆದಿತ್ತು. ಈ ವಿಚಾರ ಮಹದೇವಸ್ವಾಮಿಗೆ ತಿಳಿದು ಆಗಾಗ್ಗೆ ಪತ್ನಿಯೊಂದಿಗೆ ಜಗಳವಾಗುತ್ತಿತ್ತು. ಜತೆಗೆ ಹಲವು ಬಾರಿ ರವಿರಾಜ್‌ನೊಂದಿಗೂ ಜಗಳವಾಡಿದ್ದ. ಇದೇ ಕಾರಣಕ್ಕೆ ಬುಧವಾರ ಮಂಜುಳಾ, ಮಕ್ಕಳು ಮನೆಯಲ್ಲಿ ಇಲ್ಲದ ವೇಳೆ ಮಹದೇವಸ್ವಾಮಿ ಜತೆ ಗಲಾಟೆ ಮಾಡಿ, ಅಲ್ಲೇ ಇದ್ದ ಒನಕೆಯಿಂದ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದ.

ಪೊಲೀಸರು ರವಿರಾಜ್‌ನನ್ನು ಬಂಧಿಸಿ ವಿಚಾರಣೆ ಮಾಡಲಾಗಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ ಶಿವಕುಮಾರ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್ ನಿರ್ದೇಶನದಂತೆ ವೃತ್ತ ನಿರೀಕ್ಷಕ ಶಿವರಾಜ್ ಆರ್.ಮುಧೋಳ್, ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ತಂಡ ಪ್ರಕರಣ ಭೇದಿಸಿದ್ದಾರೆ.