ಯಡ್ರಾಮಿ: ಕಾಖಂಡಕಿಯ ಪರಿಶಿಷ್ಟ ಪಂಗಡದ ಯುವಕ ಮಲ್ಲು ದೊರೆ (23) ಎಂಬಾತನನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ ಅವರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ನ ಪರಿಶಿಷ್ಟ ಪಂಗಡ ಘಟಕದ ಜಿಲ್ಲಾ ಅಧ್ಯಕ್ಷ ಗುರುರಾಜ ಸುಬೇದಾರ್ ಮಾತನಾಡಿ, ತಾಲೂಕಿನ ಕಾಖಂಡಕಿಯಲ್ಲಿ ವಾಲ್ಮೀಕಿ ಜನಾಂಗದವರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ನಾಲ್ಕು ತಿಂಗಳ ಹಿಂದೆ ಗ್ರಾಮದ ಕುರುಬ ಜನಾಂಗದವರು ಎಸ್ಟಿ ಕಾಲನಿಗೆ ನುಗ್ಗಿ ಮಹಿಳೆಯರು, ವೃದ್ಧರು, ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದರು. ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾದ್ದರೂ, ಕೋರ್ಟ ಚಾರ್ಜ ಶೀಟ್ ಸಲ್ಲಿಸಲಾಗಿಲ್ಲ. ಇದರಿಂದ ನಿತ್ಯ ಬೆದರಿಕೆ ಒಡ್ಡಲಾಗುತ್ತಿದೆ. ಹೆದರಿಕೆಯಿಂದ ಊರು ಬಿಟ್ಟು ಹೋಗಲು ನಿರ್ಧರಿಸಿದ್ದರು. ಅದನ್ನೆ ಗುರಿಯಾಗಿಸಿಕೊಂಡು ಮಲ್ಲು ದೊರೆ ನನ್ನು ಕೊಲೆ ಮಾಡಲಾಗಿದೆ. ಈ ಬಗ್ಗೆ ಮೂವತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಜಿಲ್ಲಾಧಿಕಾರಿಗಳು ಮೃತನ ಕುಟುಂಬಕ್ಕೆ 30ಲಕ್ಷ ರೂ. ಪರಿಹಾರ ನೀಡಬೇಕು, ಕುಟುಂಬಕ್ಕೆ ಸೂಕ್ತ ಭದ್ರತೆ ಕಲ್ಪಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಾಲ್ಮೀಕಿ ಸಮಾಜದ ಜೇವಗರ್ಿ ತಾಲೂಕು ಅಧ್ಯಕ್ಷ ವೀರಘಂಟೆಪ್ಪ ಏವೂರ, ಯಡ್ರಾಮಿ ಅಧ್ಯಕ್ಷ ವೆಂಕುಬಾ ದೊಡ್ಡಮನಿ, ಪ್ರಮುಖರಾದ ನಿಂಗು ಅವರಾದ, ಮಹಾಂತೇಶ ದೊರೆ, ಚಂದ್ರು ಮಲ್ಲಾಬಾದ್, ರಮೇಶ ಮೇಲಗಿರಿ, ವಿಶ್ವಮದಕರಿ ಜೇವಗರ್ಿ, ಬಸವರಾಜ ಹೊಸಮನಿ, ದೊಡ್ಡೆಶ ಕಾಚಾಪುರ, ಗುಂಡಪ್ಪ ಮುತ್ತಕೋಡ, ನಿಂಗು ಇಜೇರಿ, ಈರಪ್ಪ ಯಡ್ರಾಮಿ ಇತರರಿದ್ದರು.