ಜಿಲ್ಲೆ

ಕೊಲೆಗಡುಕರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಪಟ್ಟು

ಚಿಕ್ಕಬಳ್ಳಾಪುರ : ಬಂಗಾರಪೇಟೆ ತಹಸೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರನ್ನು ಹತ್ಯೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಂದಾಯ ಇಲಾಖೆ, ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಸೇರಿ ಸರ್ಕಾರಿ ನೌಕರರು ಶುಕ್ರವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿ ಆರ್.ಲತಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತಹಸೀಲ್ದಾರ್ ಚಂದ್ರಮೌಳೇಶ್ವರ ನಿಯಮಾನುಸಾರ ತಪ್ಪನಹಳ್ಳಿಯ ರಾಮಮೂರ್ತಿ ಮತ್ತು ವೆಂಕಟಪತಿ ಎಂಬುವವರ ಜಮೀನಿನ ವ್ಯಾಜ್ಯದ ಸಂಬಂಧ ಪೊಲೀಸ್ ರಕ್ಷಣೆಯಲ್ಲಿ ಜಂಟಿ ಮೋಜಿಣಿ ಪ್ರಕ್ರಿಯ್ರೆಯಲ್ಲಿ ತೊಡಗಿದ್ದಾಗ ವ್ಯಕ್ತಿಯೊಬ್ಬ ಅವರನ್ನು ಚಾಕುವಿನಿಂದ ಚುಚ್ಚಿ, ಕೊಲೆ ಮಾಡಿದ್ದಾನೆ. ಕೊಲೆಗಡುಕನ ವಿರುದ್ಧ ಪ್ರಕರಣ ದಾಖಲಿಸಿ, ನಿಯಮಾನುಸಾರ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ವಿ.ಶ್ರೀನಿವಾಸ ಒತ್ತಾಯಿಸಿದರು.

ಇತ್ತೀಚೆಗೆ ಅಧಿಕಾರಿಗಳು ಭಯದಲ್ಲೇ ಕರ್ತವ್ಯ ನಿರ್ವಹಿಸಬೇಕಾದ ವಾತಾವರಣ ನಿರ್ಮಾಣವಾಗಿದೆ, ಸುರಕ್ಷತೆ ದೃಷ್ಟಿಯಿಂದ ಕಠಿಣ ಕಾನೂನು ಜಾರಿಗೆ ತರಬೇಕು. ತಹಸೀಲ್ದಾರ್ ಕೊಲೆ ಮಾದರಿಯ ಪ್ರಕರಣಗಳು ಮರುಕಳಿಸಲು ಅವಕಾಶ ನೀಡದಂತೆ ಎಂದು ಒತ್ತಾಯಿಸಿದರು.

ಸಂಘದ ಗೌರವಾಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಎನ್.ಆರ್.ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ರಮೇಶ, ಖಜಾಂಚಿ ಭರತೇಶ್ ಜೈನ್, ಪದಾಧಿಕಾರಿಗಳು ಪಿ.ಸುಧಾ, ಫೈಜಾಭಾನು, ದಿವಾಕರ್, ಶಶಿಕಲಾ, ಎಸ್.ನಂದಿನಿ ಇತರರಿದ್ದರು.