ಚಿತ್ರದುರ್ಗ: ಕೊಲೆಯಾದ ರೇಣುಕಸ್ವಾಮಿ ಅವರ ಕುಟುಂಬಸ್ಥರನ್ನು ಸಿಎಂ, ಡಿಸಿಎಂ ಬಳಿಗೆ ಕರೆದುಕೊಂಡು ಹೋಗಿ ಪತ್ನಿಗೆ ಉದ್ಯೋಗ ಅಥವಾ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ನೀಡಿದರು.
ರೇಣುಕಸ್ವಾಮಿ ಮನೆಗೆ ಶನಿವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮೃತರ ಶಿವಗಣಾರಾಧನೆ ಕಾರ್ಯ ಜೂ. 17ರಂದು ನಡೆಯಲಿದ್ದು, ಆದಾದ ನಂತರ ಬೆಂಗಳೂರಿಗೆ ಕರೆದುಕೊಂಡು ಹೋಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸುತ್ತೇನೆ ಎಂದರು.
ಕೊಲೆ ಯಾರೇ ಮಾಡಿದರೂ ತಪ್ಪೇ. ಪೊಲೀಸರ ತನಿಖೆಯ ಹಾದಿ ಅಚ್ಚುಕಟ್ಟಾಗಿದೆ. ಸರ್ಕಾರದ ನಡೆ ಕುರಿತು ಇಡೀ ಕುಟುಂಬಕ್ಕೆ ವಿಶ್ವಾಸವಿದೆ. ನೆಲದ ಕಾನೂನು ಎಲ್ಲರಿಗೂ ಒಂದೇ. ಪ್ರಭಾವಿ ನಟ, ರಾಜಕಾರಣಿ, ಮತ್ತಿನ್ಯಾರೇ ಆಗಿರಲಿ ಮಾನವರಾಗಿ ಮತ್ತೊಬ್ಬರನ್ನು ಕೊಲೆ ಮಾಡುವ ಹಂತಕ್ಕೆ ಹೋಗಬಾರದು. ಈ ದುರ್ಘಟನೆ ಅತ್ಯಂತ ವಿಷಾದನೀಯ ಎಂದರು.
ದರ್ಶನ್ ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದು, ಈ ಕುರಿತು ಸರ್ಕಾರ ನಿರ್ಧಾರ ಪ್ರಕಟಿಸಲಿದೆ. ಪೊಲೀಸ್ ಅಧಿಕಾರಿಗಳು ಯಾವ ಕಾರಣಕ್ಕೆ ಠಾಣಾ ಮುಂಭಾಗ ಶಾಮೀಯಾನ ಹಾಕಿದ್ದಾರೆಂಬ ಮಾಹಿತಿ ನನಗಿಲ್ಲ. ಆದರೆ, ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ವೈಯಕ್ತಿಕವಾಗಿ ನನ್ನ ಕೈಲಾದಷ್ಟು ನೆರವು ನೀಡಿದ್ದೇನೆ. ರೇಣುಕಸ್ವಾಮಿ ಕುಟುಂಬದ ಜೊತೆಗಿದ್ದೇವೆ. ಆ ಇಡೀ ಫ್ಯಾಮಿಲಿಯ ನೋವು ಸರ್ಕಾರಕ್ಕೂ ಅರ್ಥವಾಗಿದೆ ಎಂದರು.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾದ ಅನು ತಂದೆ ಚಂದ್ರಪ್ಪ ನಿಧನದ ಹಿನ್ನೆಲೆಯಲ್ಲಿ ಶನಿವಾರ ನಿವಾಸಕ್ಕೆ ಭೇಟಿ ನೀಡಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಕುಟುಂಬಸ್ಥರ ನೋವು ಆಲಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಇತರರಿದ್ದರು.