ಶಿವಮೊಗ್ಗ: ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಸಲು ತೆರಳಿದ್ದ ಪೇದೆ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಮುಂದಾಗಿದ್ದ ರೌಡಿಶೀಟರ್ ಕಾಲಿಗೆ ಮಂಗಳವಾರ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ರೌಡಿಶೀಟರ್ ಕಡೇಕಲ್ ಅಬೀದ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆ ಯತ್ನ ಪ್ರಕರಣದರಲ್ಲಿ ಕಡೇಕಲ್ ಅಬೀದ್ ತಲೆ ಮರೆಸಿಕೊಂಡಿದ್ದ. ಕಳೆದೊಂದು ತಿಂಗಳಿನಿಂದ ಈತನಿಗಾಗಿ ಪೊಲೀಸರು ಶೋಧಿಸುತ್ತಿದ್ದರು. ಮಂಗಳವಾರ ಆತನ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆ ಭದ್ರಾವತಿ ಪೇಪರ್ ಟೌನ್ ಇನ್ಸ್‌ಪೆಕ್ಟರ್ ನಾಗಮ್ಮ ನೇತೃತ್ವದ ತಂಡ ಬಂಧಿಸಲು ಯತ್ನಿಸಿತ್ತು. ಈ ಸಂದರ್ಭ ಅಬೀದ್ ಪೊಲೀಸ್ ಪೇದೆ ಅರುಣ್ ಕುಮಾರ್ ಮೇಲೆ ದಾಳಿ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದ.
ಶರಾಣಾಗುವಂತೆ ಸೂಚಿಸಿದರೂ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಇನ್ಸ್‌ಪೆಕ್ಟರ್ ನಾಗಮ್ಮ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಅರುಣ್ ಕುಮಾರ್ ಮತ್ತು ಕಡೇಕಲ್ ಅಬೀದ್‌ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದ್ದಾರೆ. ಕಡೇಕಲ್ ಅಬೀದ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ರಾಬರಿ, ಕೊಲೆ ಯತ್ನ ಸೇರಿ ಒಟ್ಟು 20 ಪ್ರಕರಣಗಳಿವೆ.