- ಕೊಡಗು : ವಿರಾಜಪೇಟೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಮೇ 23ರಂದು ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಗೋಣಿಕೊಪ್ಪಲು ಸಮೀಪದ ಅರುವತೋಕ್ಲು ಜೋಡುಬೀಟಿ ನಿವಾಸಿ ಲೋಕೇಶ (30), ಕೃಷ್ಣ (20), ಕೊಡಗಿನ ನಾತಂಗಾಲ ಗ್ರಾಮದ ಹರೀಶ (22) ಹಾಗೂ ಒಬ್ಬ ಅಪ್ರಾಪ್ತ ಬಂಧಿತ ಆರೋಪಿಗಳು. ರಮೇಶ (39) ಕೊಲೆಯಾದವರು.
ಘಟನೆ ವಿವರ : ಮೇ 22, 23ರಂದು ಗೋಣಿಕೊಪ್ಪಲು ಸಮೀಪದ ದೇವರಪುರದಲ್ಲಿ ಬೇಡು ಹಬ್ಬ (ಕುಂಡೆ ಹಬ್ಬ) ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಕೊಲೆಯಾದ ರಮೇಶ ಹಾಗೂ ನಾಲ್ವರು ಆರೋಪಿಗಳು ವೇಷ ಧರಿಸಿ ನರ್ತಿಸುತ್ತ ಜನರಿಂದ ಹಣ ಸಂಗ್ರಹಿಸುತ್ತಿದ್ದರು. 22 ರಂದು ಸಂಜೆ ಎಲ್ಲರೂ ಮದ್ಯ ಸೇವಿಸಿದ ಬಳಿಕ ಪರಸ್ಪರ ಹಣ ಹಂಚಿಕೆ ಮಾಡಿಕೊಳ್ಳುತ್ತಿದ್ದರು. ಇದರಲ್ಲಿ ವ್ಯತ್ಯಾಸವಾಗಿ ಗಲಾಟೆ ಏರ್ಪಟ್ಟು ಆರೋಪಿಗಳು ರಮೇಶ್‌ಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು.
ಬಳಿಕ ಮೇ 23 ರಂದು ವಿರಾಜಪೇಟೆ ಬಸ್ ನಿಲ್ದಾಣದ ಅಂಗಡಿ ಸಮೀಪ ರಮೇಶನ ಮೃತದೇಹವನ್ನು ತಂದು ಇರಿಸಿ ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.