ಜಿಲ್ಲೆ

ಕೊಲೆ ಪ್ರಕರಣ:ದರ್ಶನ ಹಾಗು ಆತನ ಸಹಚರರ ವಿರುದ್ಧ ಪ್ರತಿಭಟನೆ

ಹಾಸನ: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಸಿನಮಾ ಶೈಲಿಯಲ್ಲಿ ಕೊಲೆ ಮಾಡಿರುವ ಖ್ಯಾತ ಚಿತ್ರನಟ ದರ್ಶನ ಹಾಗು ಆತನ ಸಹಚರರ ವಿರುದ್ಧ ತನಿಖೆ ನಡೆಸಿ ಕಾನೂನಿನ ರೀತಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ವೀರಶೈವ ಲಿಂಗಾಯಿತ ಸಮಾಜದಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ನಟ ದರ್ಶನ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಕೆಲಕಾಲ ಧರಣಿ ನಡೆಸಿ, ರೇಣುಕಾಸ್ವಾಮಿಯನ್ನು ಅಮಾನುಷವಾಗಿ ಕೊಂದ ಕೊಲೆಗಡುಕ ದರ್ಶನ್‌ನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದರು.
ದರ್ಶನ್ ತೂಗುದೀಪ ಆತನ ಸ್ನೇಹಿತೆ ಪ್ರವಿತ್ರಗೌಡ ಹಾಗು 15 ಮಂದಿ ಸೇರಿಕೊಂಡು ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಸಿನಮಾ ಶೈಲಿಯಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ವೀರಶೈವ ಲಿಂಗಾಯಿತ ಸಮಾಜಕ್ಕೆ ಸೇರಿದ ರೇಣುಕಾಸ್ವಾಮಿ ವಯಸ್ಸಾದ ತಂದೆ-ತಾಯಿ, ಗರ್ಭಿಣಿ ಪತ್ನಿಯನ್ನು ಅಗಲಿರುವುದರಿಂದ ಆ ಕುಟುಂಬ ದಿಗ್ಭ್ರಮೆಗೆ ಒಳಗಾಗಿದೆ. ಹೀಗಾಗಿ ಸರ್ಕಾರ ಆ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ, ಆತನ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.
ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆನಡೆಸಿ ಆರೋಪಿಗಳು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಹಲವು ಕಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ದರ್ಶನ್ ವಿರುದ್ಧ ರೌಡಿಶೀಟರ್ ತೆರೆಯಬೇಕು. ಪ್ರಕರಣದ ವಿಚಾರಣೆಗೆ ತ್ವರಿತಗತಿಯ ನ್ಯಾಯಾಲಯ ಸ್ಥಾಪಿಸಿ ಕಾನೂನು ರೀತಿ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕಿಡಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ತಣ್ಣೀರುಹಳ್ಳ ಮಠದ ಶ್ರೀ ಬಿಜಯಕುಮಾರ ಸ್ವಾಮೀಜಿ ಹಾಗು ವೀರಶೈವ ಮಹಾಸಭಾ ವೀರಶೈವ ಲಿಂಗಾಯತ ಸಂಘದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಶರತ್ ಭೂಷಣ್, ಯು.ಎಸ್. ಬಸವರಾಜು, ಶೋಭನ್ ಬಾಬು, ಯೋಗೀಶ್, ಹೇಮಂತ್ ಕುಮಾರ್ ಇತರರು ಇದ್ದರು.