ಚಿಂಚೋಳಿ: ಅಸ್ಸಾಂ ರಾಜ್ಯದ ಮಹಿಳೆ ಜತೆ ಅನೈತಿಕ ಸಂಬಂಧ ಬೆಳೆಸಿ ಕೊಲೆ ಮಾಡಿದ್ದ ಬಿಹಾರದ ಯುವಕನನ್ನು ಬಂಧಿಸುವಲ್ಲಿ ಚಿಂಚೋಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಸ್ಮಿಕಾ ಕಾತುನ್ ನಜ್ಮೋದ್ದಿನ್ (30)ಳನ್ನು ಮಹ್ಮದ್ ಜುಲ್ಫಿಕರ್ ಅಲಿಯಾಸ್ ಅಸ್ಲಮ್ ಮಹ್ಮದ್ ಅಲಿಮೋದ್ದಿನ್ (29) ಕೊಲೆ ಮಾಡಿದ್ದ. ತಲೆಮೆರೆಸಿಕೊಂಡಿದ್ದ ಜುಲ್ಫಿಕರ್‌ನನ್ನು ಪೊಲೀಸರು ಸುಲೇಪೇಟದಲ್ಲಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ಜಿಲ್ಲಾ ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆಸ್ಮಿಕಾ ನಜ್ಮೋದ್ದಿನ್ ಮತ್ತು ಜುಲ್ಫಿಕರ್ ಪರಸ್ಪರ ಪ್ರೀತಿಸಿದ್ದರು. ತಮ್ಮೂರು ಬಿಟ್ಟು ತೆಲಂಗಾಣದಲ್ಲಿ ಕೆಲಸ ಮಾಡುತ್ತಿದ್ದರು. ಮದುವೆ ವಿಚಾರದಲ್ಲಿ ಇಬ್ಬರ ಮಧ್ಯೆ ಜಗಳ ನಡೆದಾಗ ಜುಲ್ಫಿಕರ್ ಆಕೆಯನ್ನು ಕೊಂದು 2021ರ ಏ.4ರಂದು ಪೋಲಕಪಳ್ಳಿ ಬಳಿಯ ವಿದ್ಯುತ್ ಉತ್ಪಾದಕ ಘಟಕದ ಬಳಿ ಶವ ಎಸೆದು ಹೋಗಿದ್ದ. ಮೃತ ದೇಹ ನೋಡಿದ್ದ ಸ್ಥಳೀಯರ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಸಿಪಿಐ ಮಹಾಂತೇಶ ಪಾಟೀಲ್ ನೇತೃತ್ವದ ತಂಡ, ಬುಧವಾರ ಸಂಜೆ ಸುಲೇಪೇಟದಲ್ಲಿ ಆರೋಪಿ ಜುಲ್ಫಿಕರ್‌ನನ್ನು ಬಂಧಿಸಿದೆ ಎಂದು ಘಟನೆ ಹಿನ್ನೆಲೆ ವಿವರಿಸಿದರು.
ಡಿವೈಎಸ್‌ಪಿ ಕೆ.ಬಸವರಾಜ, ಸಿಪಿಐ ಮಹಾಂತೇಶ ಪಾಟೀಲ್, ಶಫಿಯೋದ್ದಿನ್, ಈಶ್ವರ, ಶಿವಾನಂದ, ಅಂಬಾರಾಯ ಇತರರಿದ್ದರು.