ಜಿಲ್ಲೆ

ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಹಾಸನ: ಹಾಸನ ನಗರದ ಗವೇನಹಳ್ಳಿಯಲ್ಲಿ ಮಾ.17ರಂದು ನಡೆದ ಸುಮಂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.
ಹಾಸನ ನಗರದ ಹುಣಸಿನಕೆರೆ ಗ್ರಾಮದ ನಿವಾಸಿ ಸುಮಂತ್ (20) ಎಂಬಾತನನ್ನು ಮಾ.17ರಂದು ರಾತ್ರಿ 8.30ರ ಸಮಯದಲ್ಲಿ ಹಾಸನದ ಬೈಪಾಸ್ ರಸ್ತೆ ಗವೇನಹಳ್ಳಿಯಲ್ಲಿ ಸಣ್ಣ-ಪುಟ್ಟ ವಿಚಾರಕ್ಕೆ ಜಗಳವಾಗಿ ಆತನನ್ನು ನಾಲ್ವರು ಯುವಕರು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ಆರೋಪಿಗಳಾದ ಗವೇನಹಳ್ಳಿ ಗ್ರಾಮದ ಕೆ.ಎಸ್.ರೋಹನ್ ಗೌಡ (24), ಜೆ.ಎಸ್. ಪ್ರಜ್ವಲ್ ಅಲಿಯಾಸ್ ನಾಯಿಹಾಲು (23), ಸಿ.ಎನ್.ಪ್ರಜ್ವಲ್ ಅಲಿಯಾಸ್ ಬೆಟ್ಟ (24), ಸುದರ್ಶನ್ ಅಲಿಯಾಸ್ ಟಿಬೆಟ್ (25) ಎಂಬುವವರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಸುಮಂತ್ ಆಟೋ ಚಾಲಕನಾಗಿದ್ದು, ಈತ ಪ್ರತಿದಿನ ಸಂಜೆ ಬೈಪಾಸ್ ರಸ್ತೆಯ ಗವೇನಹಳ್ಳಿ ಹತ್ತಿರ ಅತೀ ವೇಗವಾಗಿ ಬೈಕ್ ಚಲಾಯಿಸಿಕೊಂಡು ತಿರುಗಾಡುತ್ತಿದ್ದ. ಇದೇ ವಿಷಯವಾಗಿ ಮಾ.17ರಂದು ವಾಗ್ವಾದ ನಡೆದು ಮಾತಿಗೆ ಮಾತು ಬೆಳೆದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಇದು ಯಾವುದೇ ಪೂರ್ವ ನಿಯೋಜಿತ ಕೃತ್ಯವಲ್ಲ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಈ ಸಂಬಂಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಡಿವೈಎಸ್‌ಪಿ ಉದಯ್ ಭಾಸ್ಕರ್ ಹಾಗೂ ಬಡಾವಣೆ ಠಾಣೆಯ ಎಸ್‌ಐ ಸ್ವಾಮಿನಾಥ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು ಎಂದರು.