ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಕೃಷ್ಣ ಕಲ್ಯಾಣ ಮಂಟಪದ ಹಿಂದೆ ಮಂಗಳವಾರ ರಾತ್ರಿ ಲೋಕೇಶ ಕಡೇಮನಿ (20) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದ 6 ಆರೋಪಿಗಳನ್ನು ಉಪನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಅವರಿಂದ 2 ಚಾಕು, ಲಾಂಗ್, ಹಾಕಿ ಸ್ಟಿಕ್ ವಶಪಡಿಸಿಕೊಂಡಿದ್ದಾರೆ.
ವಿಜಯನಗರ ಕೆಂಪಣ್ಣವರ ಕಲ್ಯಾಣ ಮಂಟಪ ಬಳಿಯ ನಿವಾಸಿ ಸಾಗರ ದಾಬಡೆ (20), ಸಿದ್ದೇಶ ಜೋಳದಡಗಿ (20), ಕಿರಣ ಹೊನ್ನಳ್ಳಿ (22), ರಜತ ನಾಯ್ಕ (18), ಶೋಯಬ ಖಾಜಾಪುರ (19) ಮತ್ತು ಮಂಜುನಾಥ ರೆಡ್ಡಿ (22) ಬಂಧಿತರು.
ಯುವತಿ ವಿಚಾರವಾಗಿ ಈ ಹಿಂದೆ ಕೆಲವು ಬಾರಿ ಲೋಕೇಶ ಹಾಗೂ ಸಾಗರ ಮತ್ತಿತರರ ನಡುವೆ ಜಗಳ ಏರ್ಪಟ್ಟಿತ್ತು. ಸಾಗರ ಗುಂಪಿನವರ ಮೇಲೆ ಲೋಕೇಶ ಹಲ್ಲೆ ಮಾಡಿದ್ದ. ಇದೇ ದ್ವೇಷ ಇಟ್ಟುಕೊಂಡು ಹೊಂಚು ಹಾಕಿದ್ದರು. ಕೃಷ್ಣ ಕಲ್ಯಾಣ ಮಂಟಪದ ಬಳಿ ರಾತ್ರಿ 8 ಗಂಟೆ ಸುಮಾರು ಲೋಕೇಶನ ಮೇಲೆ ದಾಳಿ ನಡೆಸಿದರು. ಲೋಕೇಶ ತಪ್ಪಿಸಿಕೊಳ್ಳಲು ಮುಂದಾದನಾದರೂ ಆತನನ್ನು ಬೆನ್ನಟ್ಟಿಕೊಂಡು ಹೋಗಿ ಕೃಷ್ಣ ದೇವಸ್ಥಾನದ ಹಿಂದೆ ಹೊಡೆದು ಹತ್ಯೆಗೈದು ಪರಾರಿಯಾಗಿದ್ದರು.
ಕೂಡಲೆ, ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಉಪನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಜಾಲ ಬೀಸಿದ್ದರು.
ಲೋಕೇಶನ ಸ್ನೇಹಿತರನ್ನು ವಶಕ್ಕೆ ಪಡೆದು ಕೊಲೆ ಆರೋಪಿಗಳ ಮಾಹಿತಿ ಪಡೆದು 24 ಗಂಟೆಗಳಲ್ಲಿ ಬಂಧಿಸಿದ್ದಾರೆ. ಘಟನೆಯನ್ನು ಕಂಡ ಸ್ಥಳೀಯರು ಬೆಚ್ಚಿ ಬಿದ್ದಿದ್ದು, ನಗರದಲ್ಲಿ ಮತ್ತೆ ಇಂತಹ ಘಟನೆ ಮರುಕಳಿಸದಂತೆ ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ರೌಡಿಸಂ ಮಾಡಲು ಹೋಗಿ ಮಸಣಕ್ಕೆ
ಲೋಕೇಶ ಎಸ್ಸೆಸ್ಸೆಲ್ಸಿ ಬಳಿಕ ಶಾಲೆ ಬಿಟ್ಟಿದ್ದ. ಹುಡುಗಿಯೊಬ್ಬಳ ವಿಚಾರವಾಗಿ ಮೂರ್ನಾಲ್ಕು ವರ್ಷಗಳ ಹಿಂದೆ ಸಾಗರ ಮತ್ತು ಸ್ನೇಹಿತರ ಜತೆ ಜಗಳವಾಡಿಕೊಂಡಿದ್ದ. ‘ನನಗೆ ಅಣ್ಣ ಎನ್ನಬೇಕು. ನಮಸ್ಕಾರ ಮಾಡಬೇಕು’ ಎಂದು ಯುವಕರಿಗೆ ಬೆದರಿಸುತ್ತಿದ್ದ. ಇದೇ ವಿಚಾರವಾಗಿ ಆಕ್ರೋಶಗೊಂಡಿದ್ದ ಸಾಗರ ಮತ್ತವರ ಸ್ನೇಹಿತರು ಲೋಕೇಶನ ಮಟ್ಟ ಹಾಕಲು ಹೊಂಚು ಹಾಕಿದ್ದರು. ಲೋಕೇಶ ಮಂಗಳವಾರ ರಾತ್ರಿ ಸ್ನೇಹಿತರಿಗೆ ಕರೆ ಮಾಡಿ ಕೃಷ್ಣ ಕಲ್ಯಾಣ ಮಂಟಪ ಬಳಿ ಬರಲು ಹೇಳಿದ್ದ. ಅದೇ ವೇಳೆ ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ ಎಂದು ಉಪನಗರ ಠಾಣೆ ಇನ್ಸ್ಪೆಕ್ಟರ್ ಎಸ್.ಕೆ. ಹೊಳೆಯಣ್ಣವರ ತಿಳಿಸಿದ್ದಾರೆ.