Caste column, blowing of the walaga, pig farming 
ಜಿಲ್ಲೆ

ಕೊರಮ ಎಂದೇ ನಮೂದಿಸಿ

ಎಸ್.ಎನ್.ರವೀಂದ್ರ

ಕಡೂರು: ಜಾತಿ ಜನಗಣತಿ ಸಂದರ್ಭ ಜಾತಿಯ ಕಾಲಂನಲ್ಲಿ ಕೊರಮ ಎಂದೇ ನಮೂದಿಸಬೇಕು ಎಂದು ಕೊರಮ ಕೊರಚ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಚ್.ಟಿ.ಜಯಣ್ಣ ತಿಳಿಸಿದರು.

ಬಿ.ಬೊಮ್ಮೇನಹಳ್ಳಿ ಕೊರಮ ಸಮಾಜದವರಲ್ಲಿ ಜಾತಿ ಜನಗಣತಿ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿ, ಜಾತಿ ಜನಗಣತಿ ಮಾಡುವವರು ಮನೆಗೆ ಬಂದಾಗ ಜಾತಿ ಕಾಲಂನಲ್ಲಿ ಕೊರಮ ಎಂದೇ ನಮೂದಿಸುವುದರ ಜತೆಗೆ ನಮ್ಮ ಕುಲ ಕಸುಬನ್ನು ತಪ್ಪದೆ ನಮೂದಿಸಬೇಕು. ಯಾವುದೇ ಕಾರಣಕ್ಕೂ ಇತರ ಹೆಸರನ್ನು ನಮೂದಿಸಬಾರದು ಎಂದರು.

ಜನಸಂಖ್ಯೆ ಹೆಚ್ಚಿದ್ದರೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಪಡೆಯಲು ಸಾಧ್ಯ. ಹಳ್ಳಿಗಳಲ್ಲಿ ಕೊರಮ ಸಮಾಜವನ್ನು ಪ್ರಾದೇಶಿಕವಾಗಿ ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಆದರೆ ಜಾತಿ ಜನಗಣತಿ ಸಂದರ್ಭ ಬೇರೆ ಯಾವುದೇ ಹೆಸರನ್ನು ನಮೂದಿಸಬಾರದು. ಕೊರಮ ಎಂದು ಸ್ಪಷ್ಟವಾಗಿ ನಮೂದಿಸಬೇಕು. ಉದ್ಯೋಗದ ಕಾಲಂನಲ್ಲಿ ನಮ್ಮ ಕುಲ ಕಸುಬಾದ ಬುಟ್ಟಿ ಹೆಣೆಯುವುದು, ವಾಲಗ ಊದುವುದು, ಹಂದಿ ಸಾಕಣೆಯನ್ನೇ ನಮೂದಿಸಬೇಕು ಎಂದು ತಿಳಿಸಿದರು.

ಅಲೆಮಾರಿ ಒಕ್ಕೂಟದ ತಾಲೂಕು ಅಧ್ಯಕ್ಷ ಹೋರಿತಿಮ್ಮನಹಳ್ಳಿ ಶ್ರೀನಿವಾಸ್ ಮಾತನಾಡಿ, ಅನೇಕ ವರ್ಷಗಳ ನಂತರ ಜಾತಿ ಜನಗಣತಿ ನಡೆಯುತ್ತಿದೆ. ಹಾಗಾಗಿ ಯಾರ ಹೆಸರೂ ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು. ಸರ್ಕಾರದ ದಾಖಲೆಯಲ್ಲಿ ಕೊರಮ ಎಂದೇ ನಮೂದಿಸಬೇಕು. ಕೆಲಸದ ನಿಮಿತ್ತ ವಲಸೆ ಹೋಗಿರುವವರನ್ನು ಊರಿಗೆ ಕರೆಯಿಸಿ ಜಾತಿ ಜನಗಣತಿಯಲ್ಲಿ ಹೆಸರು ಸೇರ್ಪಡೆಗೊಳ್ಳುವಂತೆ ನೋಡಿಕೊಳ್ಳಬೇಕು. ಜಾತಿ ಜನಗಣತಿಯಲ್ಲಿ ಸುಮಾರು 46 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಷ್ಟೂ ಪ್ರಶ್ನೆಗಳಿಗೆ ಎಲ್ಲರೂ ಸರಿಯಾಗಿ ಉತ್ತರಿಸಬೇಕು ಎಂದು ತಿಳಿಸಿದರು.

ಅಲೆಮಾರಿ ಅನುಷ್ಠಾನ ಜಿಲ್ಲಾ ಸಮಿತಿ ಸದಸ್ಯ ಮಲ್ಲಿದೇವಿಹಳ್ಳಿ ಶ್ರೀನಿವಾಸ್, ಮುಖಂಡರಾದ ಪಿ.ಟಿ.ಅಣ್ಣಯ್ಯ, ಮಂಜುನಾಥ್,ನಿವೃತ್ತ ಶಿಕ್ಷಕ ಸಿದ್ದರಾಮಪ್ಪ, ತ್ಯಾಗರಾಜ್ ಇತರರಿದ್ದರು.