ಕೊರಟಗೆರೆ: ಚೀಲಗಾನಹಳ್ಳಿ ಸಮೀಪ 15 ವರ್ಷಗಳಿಂದ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿಕ್ರಷರ್ ಘಟಕ ಸ್ಥಾಪನೆಗೆ ರೈತರು ವಿರೋಧಿಸಿದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಸ್ತಕ್ಷೇಪ ಮಾಡಿದ್ದು, ಪರಿಸ್ಥಿತಿ ತಣಿಯುವ ಸಾಧ್ಯತೆ ಮೂಡಿದೆ.
ಪ್ರಕೃತಿಗೆ ಪೆಟ್ಟಾಗದಿರಲಿ, ಭೂಮಿಗೆ ಒತ್ತಡ ಬೀಳದಿರಲಿ ಎಂಬ ಆಶಯದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಗುರುವಾರ ಅಹೋರಾತ್ರಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ರೈತರು ಹೋರಾಟ ಹಿಂಪಡೆದರು.
ಹೀಗಾಗಿ ಕಲ್ಲು ಗಣಿಗಾರಿಕೆಗೆ ತಡೆ ಸಿಗಬಹುದೆಂಬ ನಿರೀಕ್ಷೆ ರೈತ ಸಮುದಾಯದಲ್ಲಿ ಮೂಡಿದೆ. ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಕಡೆ ಕಲ್ಲು ಗಣಿಗಾರಿಕೆ ಪ್ರಾರಂಭಕ್ಕೆ ವಿರೋಧ ಇರುವಂತಹ ಮಾಹಿತಿ ನನಗೆ ಲಭ್ಯವಿದೆ. ಜಿಲ್ಲಾಮಟ್ಟದ ಅಧಿಕಾರಿಗಳ ಜತೆ ಹಲವು ಸಭೆ ನಡೆಸಿದ್ದೇನೆ. ಮುಂಬರುವ ದಿನದಲ್ಲಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ರೈತರಿಗೆ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳುತ್ತೇನೆ. ನಾನು ರೈತರೊಂದಿಗೆ ಸಮಾಲೋಚನೆ ನಡೆಸಿದ್ದು, ನನ್ನ ಭರವಸೆಗೆ ರೈತರು ಒಪ್ಪಿಕೊಂಡಿದ್ದು, ಪ್ರತಿಭಟನೆ ಕೈಬಿಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಮಾಹಿತಿ ನೀಡಿದ್ದಾರೆ.