ಜಿಲ್ಲೆ

ಕೊರಟಗೆರೆ ಪಟ್ಟಣ ಪಂಚಾಯಿತಿ ಗಾದಿಗೆ ಗುದ್ದಾಟ 5ಕ್ಕೆ ನಿಗದಿ ; ಚುಕ್ಕಾಣಿ ಹಿಡಿಯಲು ಜೆಡಿಎಸ್, ಕಾಂಗ್ರೆಸ್ ಪೈಪೋಟಿ

ಕೊರಟಗೆರೆ: ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿಗೆ ನ.5ರಂದು ಚುನಾವಣೆ ನಡೆಯಲಿದೆ, ಚುಕ್ಕಾಣಿ ಹಿಡಿಯಲು ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸದಸ್ಯರನ್ನು ಕಾಪಾಡಿಕೊಳ್ಳಲು ಉಭಯ ಪಕ್ಷಗಳು ತಮ್ಮ ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಿವೆ.

ಒಟ್ಟು 15 ಸದಸ್ಯರ ಬಲ ಹೊಂದಿರುವ ಪಪಂನಲ್ಲಿ ಜೆಡಿಎಸ್ 8, ಕಾಂಗ್ರೆಸ್ 5, ಪಕ್ಷೇತರ ಹಾಗೂ ಬಿಜೆಪಿ ತಲಾ ಒಂದು ಸ್ಥಾನ ಪಡೆದಿವೆ. ಕಾಂಗ್ರೆಸ್‌ನಿಂದ ಗೆದ್ದಿದ್ದ ಒಬ್ಬ ಸದಸ್ಯ ಮೃತಪಟ್ಟಿರುವ ಪರಿಣಾಮ ಕಾಂಗ್ರೆಸ್ ಸದಸ್ಯರ ಸಂಖ್ಯೆ 4ಕ್ಕೆ ಕುಸಿದಿದೆ, ಅಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿದೆ.

ಸದಸ್ಯರನ್ನು ಸೆಳೆಯಲು ಕಾಂಗ್ರೆಸ್ ತಂತ್ರ

ಜೆಡಿಎಸ್‌ನಲ್ಲಿ ಎಸ್‌ಟಿ ಮೀಸಲಿನಿಂದ 1ನೇ ವಾರ್ಡ್‌ನಿಂದ ಕೆ.ವಿ.ಕಾವ್ಯಶ್ರೀ, 9ನೇ ವಾರ್ಡ್‌ನಿಂದ ಭಾಗ್ಯಮ್ಮ ಗಣೇಶ್ ಹಾಗೂ 8ನೇ ವಾರ್ಡ್‌ನಿಂದ ಮಂಜುಳಾ ಸತ್ಯನಾರಾಯಣ್ ಆಯ್ಕೆಯಾಗಿದ್ದು ಈ ಮೂವರು ಅಧ್ಯಕ್ಷ ಗಾದಿಯ ರೇಸ್‌ನಲ್ಲಿದ್ದಾರೆ, ಈ ಮೀಸಲಿನಲ್ಲಿ ಯಾವೊಬ್ಬ ಸದಸ್ಯರು ಆಯ್ಕೆಯಾಗದಿದ್ದರೂ ಕಾಂಗ್ರೆಸ್ ಮಾತ್ರ ಜೆಡಿಎಸ್, ಬಿಜೆಪಿ ಹಾಗೂ ಪಕ್ಷೇತರರನ್ನು ಸೆಳೆದು ಗದ್ದುಗೆ ಏರಲು ಸೆಣೆಸಾಟ ನಡೆಸಿದೆ, ಪಟ್ಟಣ ಪಂಚಾಯಿತಿ ಗದ್ದುಗೆ ಗುದ್ದಾಟವನ್ನು ಶಾಸಕ ಡಾ.ಜಿ.ಪರಮೇಶ್ವರ್ ಸವಾಲಾಗಿ ಸ್ವೀಕರಿಸಿದ್ದಾರೆ ಎನ್ನಲಾಗಿದೆ.

ಇತ್ತ ಕಳೆದ ಬಾರಿ ಜೆಡಿಎಸ್‌ಗೆ ಬಹುಮತ ಇದ್ದರೂ ಮೈತ್ರಿಧರ್ಮದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಬಿಟ್ಟುಕೊಟ್ಟಿದ್ದ ಮಾಜಿ ಶಾಸಕ ಪಿ.ಆರ್ ಸುಧಾಕರ್ ಲಾಲ್, ಈ ಬಾರಿ ಅಧಿಕಾರ ಪಡೆಯಲೇಬೇಕು ಎಂದು ಹಠಕ್ಕೆ ಬಿದ್ದಿದ್ದು, ತಂತ್ರ ರೂಪಿಸುತ್ತಿದ್ದಾರೆ

ಕಾಂಗ್ರೆಸ್‌ನಿಂದ ನಂಬರ್ ಗೇಮ್: ಬಹುಮತ ಇಲ್ಲದಿದ್ದರೂ ಕಾಂಗ್ರೆಸ್ ನಂಬರ್ ಗೇಮ್ ಮೂಲಕ ಅಧಿಕಾರ ಪಡೆಯಲು ಮುಂದಾಗಿದೆ. ಪಟ್ಟಣ ಪಂಚಾಯಿತಿ ಒಟ್ಟು ಬಲ 15. ಶಾಸಕ ಹಾಗೂ ಸಂಸದರ ಮತ ಸೇರಿದರೆ ಒಟ್ಟು ಬಲ 17ಕ್ಕೇರಿಕೆಯಾಗುತ್ತದೆ, ಕಾಂಗ್ರೆಸ್‌ನ ಒಬ್ಬ ಸದಸ್ಯ ಮೃತಪಟ್ಟಿರುವ ಹಿನ್ನೆಲೆಯಲ್ಲಿ 16 ಆಗುತ್ತದೆ. ಈಗ ಬಹುಮತಕ್ಕೆ 9 ಸದಸ್ಯರು ಅಗತ್ಯ. ಕಾಂಗ್ರೆಸ್‌ನ ನಾಲ್ವರು ಸದಸ್ಯರು ಹಾಗೂ ಶಾಸಕರ ಮತ ಸೇರಿ 5 ಆಗುತ್ತದೆ. ಮತದಾನದ ವೇಳೆ ಸಂಸದರು ಗೈರಾದರೆ ಆಗ ಬಹುಮತಕ್ಕೆ 3 ಸದಸ್ಯರು ಸಾಕಾಗುತ್ತದೆ. ಇದನ್ನೇ ಲೆಕ್ಕ ಹಾಕಿರುವ ಕಾಂಗ್ರೆಸ್ ನಾಯಕರು ಜೆಡಿಎಸ್‌ನಿಂದ ಓರ್ವ ಎಸ್‌ಟಿ ಮಹಿಳೆ ಹಾಗೂ ಒಬ್ಬೊಬ್ಬ ಬಿಜೆಪಿ, ಪಕ್ಷೇತರನನ್ನು ಸೆಳೆಯುವ ನಂಬರ್ ಪ್ಲ್ಯಾನ್‌ನಲ್ಲಿ ತೊಡಗಿದೆ.