ತಿ.ನರಸೀಪುರ: ಪುರಸಭೆ ವ್ಯಾಪ್ತಿಯ ಬಂಗಾರಪ್ಪ ಬಡಾವಣೆಯಲ್ಲಿ ಅಲೆಮಾರಿ ಕೊರಚ ಸಮುದಾಯದ ಕುಟುಂಬಗಳಿಗೆ ತಾಲೂಕು ಆಡಳಿತ ಒಂದು ಎಕರೆ ಸರ್ಕಾರಿ ಜಮೀನನ್ನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ತಾಲೂಕು ಕಚೇರಿ ಆವರಣದಲ್ಲಿ ಐದು ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ ಅಂತ್ಯಗೊಂಡಿತು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಪ.ಜಾತಿಯ ಅಲೆಮಾರಿ ಕೊರಚ ಸಮುದಾಯದ ಕುಟುಂಬಗಳು ನಿವೇಶನ ಮತ್ತು ವಸತಿ ಯೋಜನೆ ಮಂಜೂರು ಮಾಡುವಂತೆ ಆಗ್ರಹಿಸಿ ಸೋಮವಾರದಿಂದ ಧರಣಿ ಆರಂಭಿಸಿದ್ದರು. ನಿವೇಶನ ಮಂಜೂರಾತಿಗೆ 10 ದಿನಗಳ ಕಾಲಾವಕಾಶ ನೀಡುವಂತೆ ತಾಲೂಕು ಆಡಳಿತ ಕೇಳಿದ್ದರೂ ಒಪ್ಪದ ಪ್ರತಿಭಟನಾಕಾರರು ಧರಣಿ ಮುಂದುವರಿಸಿದ್ದರು.
ಸ್ಥಳಕ್ಕೆ ಕರ್ನಾಟಕ ಪ. ಜಾತಿ ಮತ್ತು ಪ.ಪಂಗಡಗಳ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್, ಸಮಾಜ ಕಲ್ಯಾಣ ಅಧಿಕಾರಿ ರಾಮೇಗೌಡ ಅವರು ಆಗಮಿಸಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ತಾಲೂಕು ಆಡಳಿತ ಬಂಗಾರಪ್ಪ ಬಡಾವಣೆಯಲ್ಲಿ ಒಂದು ಎಕರೆ ಸರ್ಕಾರಿ ಜಮೀನನ್ನು ಮಂಜೂರು ಮಾಡಿದ್ದು, ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಐದು ದಿನಗಳ ಪ್ರತಿಭಟನೆ ಕೊನೆಗೊಂಡಿತು.
ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಬುಡಕಟ್ಟು ಅಲೆಮಾರಿಗಳ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಆದರ್ಶ ಎಲ್ಲಪ್ಪ, ಪದಾಧಿಕಾರಿಗಳಾದ ಶಿವಕುಮಾರ್‌ಸಾಗರ್, ದಸಂಸ ಹಿರಿಯ ಮುಖಂಡ ಛಲವಾದಿ ನಾರಾಯಣಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗ ಸ್ವಾಮಿ, ಅಲೆಮಾರಿ ಕುಳುವ ಸಂಘದ ಅಧ್ಯಕ್ಷ ಕೊಡಗಹಳ್ಳಿ ಎನ್.ರವಿಕುಮಾರ್, ದಸಂಸ ತಾಲೂಕು ಸಂಚಾಲಕರಾದ ಕುಕ್ಕೂರು ರಾಜು, ಯಾಚೇನಹಳ್ಳಿ ಸೋಮಶೇಖರ್, ಸಂಘಟನಾ ಸಂಚಾಲಕರಾದ ಆಲಗೂಡು ನಾಗರಾಜಮೂರ್ತಿ, ಕಿರಗಸೂರು ರಜನಿ, ಶಾಂತಕುಮಾರ್, ಮೋಹನ್ ಕಾಯಕ, ಕೊರಚ ಮುಖಂಡರಾದ ರಾಜು, ವೆಂಕಟೇಶ್, ಕೊಟ್ರೇಶಿ, ಮಾರಪ್ಪ ಇತರರಿದ್ದರು.