ಬನ್ನೂರು: ಪಟ್ಟಣದ ರೋಟರಿ ಸಂಸ್ಥೆ, ಕಾನ್‌ಸಿಂಗ್‌ಜೀ ರಾಜ್‌ಪುರೋಹಿತ್, ಶ್ರೀ ಗೌರಿದೇವಿ, ಲಯನ್ಸ್ ಕ್ಲಬ್ ಆಫ್ ಈರೋಡ್, ಕಾವೇರಿ ಟ್ರಸ್ಟ್ ಹಾಗೂ ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ ಶಿಬಿರಾರ್ಥಿಗಳು ತಮಿಳುನಾಡಿನ ಕೊಯಮತ್ತೂರಿನಲ್ಲಿ ಯಶಸ್ವಿಯಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮಂಗಳವಾರ ತವರಿಗೆ ವಾಪಸಾದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿಬಿರಾರ್ಥಿಗಳು, ಕಣ್ಣು ಕಳೆದುಕೊಂಡು ಹಲವಾರು ವರ್ಷಗಳಿಂದ ವಿವಿಧ ಸಮಸ್ಯೆಗಳಿಂದ ಕತ್ತಲೆಯಲ್ಲಿಯೇ ಜೀವನ ಸಾಗಿಸಿ, ನರಕದ ದರ್ಶನವಾದಂತೆ ಅಗಿತ್ತು. ಅದರೆ ರೋಟರಿ ಮಾಜಿ ಅಧ್ಯಕ್ಷ ಡಾ.ಮಹೇಂದ್ರಸಿಂಗ್‌ಕಾಳಪ್ಪ ಅವರು ಏರ್ಪಡಿಸಿದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ನಮ್ಮ ಕಣ್ಣನ್ನು ನುರಿತ ವೈದ್ಯರಿಗೆ ತೋರಿಸಿ, ಶಸ್ತ್ರಚಿಕಿತ್ಸೆಗೆ ಕೊಯಮತ್ತೂರಿಗೆ ಉಚಿತವಾಗಿ ಕಳುಹಿಸಿ, ಕಣ್ಣಿನ ದೃಷ್ಟಿ ನೀಡಿದ್ದಾರೆ ಎಂದು ಸಂತಸದಿಂದ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಮಹೇಂದ್ರಸಿಂಗ್‌ಕಾಳಪ್ಪ , ಕಣ್ಣು ಕಾಣದ ಜೀವನ ಹೇಗೆ ಎನ್ನುವುದು ಅನುಭವಿಸಿದವರಿಗೆ ತಿಳಿದಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಣ್ಣಿನ ಸಮಸ್ಯೆ ಇರುವವರು ನಗರ ಪ್ರದೇಶದಲ್ಲಿ ಹೋಗಿ ಚಿಕಿತ್ಸೆ ಪಡೆಯಲಾರದೆ ತುಂಬಾ ಕಷ್ಟದಲ್ಲಿ ಜೀವನ ಕಳೆಯುತ್ತಾರೆ. ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ಶಿಬಿರಗಳು ಸದುಪಯೋಗವಾಗಬೇಕು ಎಂಬ ದೃಷ್ಟಿಯಿಂದ ಉಚಿತ ಕಣ್ಣಿನ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಣ್ಣಿನ ಸಮಸ್ಯೆ ಇದ್ದವರು ಮುಂದಿನ ಸೆ.13ರಂದು ನಡೆಯುವ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬಹುದು ಎಂದು ಹೇಳಿದರು. ನಂತರ ಶಿಭಿರಾರ್ಥಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.
ಮುಖಂಡ ಯಾಸೀನ್, ನಾರಾಯಣ, ವನ್ಯ, ವಿರಾಟ್, ಸಂತೋಷ್‌ಕುಮಾರಿ, ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.