ಹಾಸನ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೊಬ್ಬರಿ ಮತ್ತು ತೆಂಗು ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಸೆ.26 ಮಂಗಳವಾರ ಅರಸೀಕೆರೆಯ ಎ.ಪಿ.ಎಂ.ಸಿ ಆವರಣದಿಂದ ಬೃಹತ್ ಪಾದಯಾತ್ರೆ ಮೂಲಕ ಅ.4ರಂದು ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಸಂಘಟನೆಯ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ ಎಚ್ಚರಿಸಿದರು.
ಏಷ್ಯಾದಲ್ಲಿ ಅರಸೀಕೆರೆ ಮಾರುಕಟ್ಟೆ ಅತಿ ದೊಡ್ಡ ಮಾರುಕಟ್ಟೆ ಹೊಂದಿರುವ ಜಿಲ್ಲೆಯಲ್ಲಿ ತೆಂಗು ಬೆಳೆಯುವ ಪ್ರದೇಶ ಹೊಂದಿದ್ದು, ಕೊಬ್ಬರಿ ಬೆಲೆ ಸಂಪೂರ್ಣ ಕುಸಿತವಾಗಿದೆ. ಇದ್ದರಿಂದ ಬೆಳೆಗಾರರು ಸಂಕಷ್ಟ ಅನುಭಸುತ್ತಿದ್ದಾರೆ. 18 ಸಾವಿರ ರೂ.ಗಳಿಗೆ ಮಾರಾಟವಾಗುತ್ತಿದ್ದ ಕ್ವಿಂಟಾಲ್ ಕೊಬ್ಬರಿ, ಕಳೆದ 8ತಿಂಗಳಿಂದ 7500 ರೂ.ಗಳಿಗೆ ಮಾರಾಟವಾಗುತ್ತಿದೆ. ರಾಜ್ಯ ಸರಕಾರದ ಗಮನ ಸೆಳೆಯಲು ರೈತ ಸಂಘಟನೆ ವತಿಯಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ಸರಕಾರ ಬೆಂಬಲ ಬೆಲೆಗಿಂತ 4ಸಾವಿರ ರೂ.ಗಳಿಗೆ ಕಡಿಮೆಗೆ ಕೊಬ್ಬರಿ ಖರೀದಿಸಲಾಗುತ್ತಿದೆ. ಕೇಂದ್ರ ಆದೇಶದಂತೆ ಕಳೆದ 2 ತಿಂಗಳಿಂದ ನಫೆಡ್‌ನಿಂದ ರೈತರ ಕೊಬ್ಬರಿ ಖರೀದಿಸುತ್ತಿದೆ. ಆದರೆ, 20 ದಿನಗಳಿಂದ ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಕೂಡಲೇ ಇದನ್ನು ಪ್ರಾರಂಭಿಸಿ ಕೇಂದ್ರ ಸರಕಾರ ನಿಗದಿಪಡಿಸಿರುವ ಕ್ವಿಂಟಾಲ್‌ಗೆ 11750 ರೂ.ಖರೀದಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಇಂದಿನ ಕೃಷಿ ಬೆಲೆ ಆಯೋಗ ಕ್ವಿಂಟಾಲ್‌ಗೆ 17 ಸಾವಿರ ರೂ. ಬೆಂಬಲ ಬೆಲೆ ನೀಡುವಂತೆ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದೆ. ನುಸಿ ಪೀಡೆ ರೋಗ, ಕಾಂಡ ಕೊರೆತ, ಅತಿವೃಷ್ಟಿ, ಅನಾವೃಷ್ಟಿ, ಇಳುವರಿಯಿಂದ ಕುಂಠಿತ ಬೆಲೆ ಕುಸಿತದಿಂದ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಸರಕಾರ ಕೂಡಲೇ 25 ಸಾವಿರ ರೂ.ಬೆಂಬಲ ಬೆಲೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸಕಾರ ರೈತರಿಗೆ ಮಾರಕವಾಗಿರುವ ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯಬೇಕು ಮತ್ತು ಎಂ.ಎಸ್.ಪಿ ಶಾಸನಬದ್ಧಗೊಳಿಸಬೇಕು. ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಕಡತ ಮಾಡುವುದನ್ನ ನಿಲ್ಲಿಸಬೇಕು. ಹಾಗೆಯೇ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಾಕಷ್ಟು ಜೀವಹಾನಿಗಳಾಗಿದ್ದು, ಜಿಲ್ಲಾಡಳಿತ ಹಾಗೂ ಸರಕಾರ ಶಾಶ್ವತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಬಾಬು, ಮಹಮದ್ ಸಾದಿಕ್, ಬೊರನಕೊಪ್ಪಲು ಜಯರಾಮ, ಕಾಳಮ್ಮ, ಪವಿತ್ರಾ ಸೇರಿದಂತೆ ಇತರರು ಇದ್ದರು.