ಅರಸೀಕೆರೆ: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳದ ಜತೆಗೆ ಅಕ್ರಮ-ಸಕ್ರಮ ಯೋಜನೆಯಡಿ ಹಣ ಪಾವತಿ ಮಾಡಿರುವ ರೈತರಿಗೆ ಸಕಾಲಕ್ಕೆ ವಿದ್ಯುತ್ ಪರಿವರ್ತಕ ನೀಡುವಂತೆ ಒತ್ತಾಯಿಸಿ ಡಿ.16ರಂದು ಶುಕ್ರವಾರ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಅಂದು ಬೆಳಗ್ಗೆ 10 ಗಂಟೆಗೆ ಪ್ರವಾಸಿ ಮಂದಿರದಿಂದ ಎಪಿಎಂಸಿವರೆಗೆ ಮೆರವಣಿಗೆ ನಡೆಸಿ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಕಳೆದ ಮೂರ‌್ನಾಲ್ಕು ತಿಂಗಳಿನಿಂದ ಸತತ ಬೆಲೆ ಕುಸಿತದಿಂದ ತೆಂಗು ಬೆಳೆಗಾರರು ಹೈರಾಣಾಗಿದ್ದಾರೆ. 19 ಸಾವಿರ ರೂ. ಆಸುಪಾಸಿನಲ್ಲಿದ್ದ ಕ್ವಿಂಟಾಲ್ ಕೊಬ್ಬರಿ ಧಾರಣೆ 11 ಸಾವಿರ ರೂ. ಸನಿಹಕ್ಕೆ ಕುಸಿದಿರುವುದು ಆತಂಕಕಾರಿ ಸಂಗತಿಯಾಗಿದೆ. ವಾಸ್ತವ ಮನಗಂಡು ಕೇಂದ್ರ ಸರ್ಕಾರ ತಕ್ಷಣವೇ ಮಧ್ಯೆ ಪ್ರವೇಶಿಸಿ ಬೆಂಬಲ ಬೆಲೆ ಹೆಚ್ಚಳಕ್ಕೆ ಮುಂದಾಗಬೇಕು. ಜತೆಗೆ ಅಕ್ರಮ-ಅಕ್ರಮ ಯೋಜನೆಯಡಿ ವಿದ್ಯುತ್ ಪರಿವರ್ತಕ ಪಡೆಯಲು ಹಣ ಪಾವತಿ ಮಾಡಿರುವ ಅನ್ನದಾತರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಧಾವಿಸಬೇಕು ಎನ್ನುವ ನಮ್ಮ ಮನವಿಗೆ ಸ್ಪಂದನೆ ದೊರೆತಿಲ್ಲ. ಆದ್ದರಿಂದಲೇ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸದನದಲ್ಲಿ ಸಿದ್ದರಾಮಯ್ಯ ಪರ ಮಾತನಾಡಿದ ದಿನದಿಂದಲೂ ಜೆಡಿಎಸ್‌ನಲ್ಲಿ ನನಗೆ ಸೂಕ್ತ ಮನ್ನಣೆ ದೊರೆಯದಂತಾಗಿದೆ. ಜೆಡಿಎಸ್ ವರಿಷ್ಠರು ಬೇರೆಯವರಿಗೆ ಟಿಕೆಟ್ ನೀಡಿದರೆ ನನಗೆ ಬೇರೆ ಪಕ್ಷ ಸೇರುವುದು ಅನಿವಾರ್ಯವಲ್ಲವೇ ಎಂದು ಕಾಂಗ್ರೆಸ್ ಸೇರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಮಾರ್ಮಿಕ ಉತ್ತರ ನೀಡಿದರು.
ಜಿಪಂ ಮಾಜಿ ಸದಸ್ಯ ಬಿಳಿಚೌಡಯ್ಯ, ಗೀಜಿಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಧರ್ಮಶೇಖರ್,ಕರವೇ ನಗರಾಧ್ಯಕ್ಷ ಕಿರಣ್ ಕುಮಾರ್, ಮುಖಂಡ ಹರತನಹಳ್ಳಿ ಜಯಣ್ಣ ಇತರರು ಇದ್ದರು.