ಕೊಪ್ಪಳ: ರಾಜ್ಯ ಸರ್ಕಾರ ರೈತ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸರ್ಕಾರ ದುರುದ್ದೇಶದಿಂದ ರೈತರಿಗೆ ಮಾರಕವಾಗಿ ನಡೆದುಕೊಳ್ಳುತ್ತಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಸಪ್ ಪಡೆದಿದ್ದು, ರೈತರು ತಮಗಿಷ್ಟ ಬಂದಲ್ಲಿ ಬೆಳೆ ಮಾರಾಟಕ್ಕೆ ಕೊಕ್ಕೆ ಹಾಕಿದೆ. ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಸಿದ್ದು, ಹತ್ತಿ, ಕೈ ಮಗ್ಗ ಇನ್ನಿತರ ಕೃಷಿ ಉದ್ಯಮಗಳಿಗೆ ಹೊಡೆತ ನೀಡಿದೆ. ರೈತರ ಮಕ್ಕಳಿಗೆ ವರವಾಗಿದ್ದ ರೈತ ವಿದ್ಯಾ ನಿಧಿ ಯೋಜನೆ ಮೊಟಕುಗೊಳಿಸಿದ್ದು, ಬಡ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಕಲ್ಲು ಹಾಕಿದೆ. ಜಿಲ್ಲೆಗೊಂದರಂತೆ ಆರಂಭಿಸಿದ್ದ ಗೋಶಾಲೆಗಳನ್ನು ರದ್ದುಪಡಿಸಿ ಹಿಂದುಗಳ ಭಾವನೆಗೆ ಧಕ್ಕೆ ತಂದಿದೆ. ಭೂ ಸಿರಿ, ಕಿಸಾನ್ ಸಮ್ಮಾನ್ ಯೋಜನೆ ಸ್ಥಗಿತಗೊಳಿಸಿದೆ. ಕೃಷಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಕೈ ಬಿಟ್ಟಿದ್ದು, ನೀರಾವರಿ ಯೋಜನೆಗಳಿಗೆ ಬಿಡಿಗಾಸು ನೀಡದೆ ರೈತರ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ರೈತಪರ ಯೋಜನೆಗಳನ್ನು ಮುಂದುವರೆಸಬೇಕು. ಕೃಷಿ ಸಂಬಂಧಿ ಉದ್ಯಮಗಳ ವಿದ್ಯುತ್ ದರ ಏರಿಕೆ ವಿನಾಯಿತಿ ನೀಡಬೇಕು. ರೈತ ವಿದ್ಯಾನಿಧಿ ಯೋಜನೆ ಮುಂದುವರೆಸಬೇಕು. ರೈತರ ಉತ್ಪನ್ನ ಮಾರಾಟಕ್ಕೆ ಮುಕ್ತ ಅವಕಾಶ ಒದಗಿಸಬೇಕು. ಬೆಂಬಲ ಬೆಲೆ ಯೋಜನೆಯಡಿ ಧಾನ್ಯ ಖರೀದಿಗೆ ಆವರ್ತ ನಿಧಿ ಮುಂದುವರಿಸಬೇಕು. ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ ರೈತರಿಗೆ ರೈತ ಸಿರಿ ಯೋಜನೆ ಮುಂದುವರಿಸಬೇಕು. ಕೃಷಿ ಸಂಬಂಧಿ ಯೋಜನೆಗಳಿಗೆ ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿದರು. ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲಂಕೇಶ ಗುಳದಾಳ, ಪ್ರಮುಖರಾದ ಮಂಜುಳಾ ಕರಡಿ, ಗಣೇಶ ಹೊರತಟ್ನಾಳ್, ಮಹಾಲಕ್ಷ್ಮೀ ಕಂದಾರಿ, ಸುನೀಲ್ ಹೆಸರೂರು, ರಮೇಶ ಕವಲೂರು ಇತರರಿದ್ದರು.