ಹಾಸನ: ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಆದರೆ, ಜೆಡಿಎಸ್ ತವರು ಕ್ಷೇತ್ರದಲ್ಲೇ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಈವರೆಗೂ ಹೊಂದಾಣಿಕೆ ಮೂಡದಿರುವುದು ಮುಂದಿನ ರಾಜ್ಯಮಟ್ಟದ ನಾಯಕರಲ್ಲಿ ಮುಜುಗರ ತಂದಿದೆ. ಲೋಕಸಭೆ ಚುನಾವಣೆಯಲ್ಲಿ ಆದ ಮೈತ್ರಿ ಸಮಯದಿಂದಲೂ ಮೌನ್ನೆ ನಡೆದ ಹಾಸನ ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆವರೆಗೂ ಜಿಲ್ಲೆಯಲ್ಲಿ ಬಿಜೆಪಿ-ಜೆಡಿಎಸ್ ಪರಸ್ಪರ ಎದುರಾಳಿಗಳಾಗಿ ಇದ್ದಾರೆ ಹೊರತು ಎಂದಿಗೂ ಹೊಂದಾಣಿಕೆ ಸಾಧ್ಯವೇ ಇಲ್ಲ ಎಂಬುದನ್ನು ಸಾರುತ್ತಾ ಬಂದಿದ್ದಾರೆ.
ಏಳು ತಿಂಗಳ ಹಿಂದೆ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಗೆ ಟಕ್ಕರ್ ಕೊಟ್ಟಿತ್ತು. ಒಪ್ಪಂದದಂತೆ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡುವ ಮಾತಾಗಿತ್ತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಎಂ. ಚಂದ್ರೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಂತರ ಬಿಜೆಪಿಯಿಂದ ಗೆದ್ದು ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಹೇಮಲತಾ ಅವರನ್ನು ಬಿಜೆಪಿ ವಿರೋಧದ ನಡುವೆಯೇ ಆಯ್ಕೆ ಮಾಡಿ ‘ಬಿಜೆಪಿ ಅಭ್ಯರ್ಥಿಯನ್ನೇ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿ ಮೈತ್ರಿ ಧರ್ಮ ಪಾಲಿಸಿದ್ದೇವೆ,’ ಎಂದು ಹೇಳಿ ಬಿಜೆಪಿಗೆ ಜೆಡಿಎಸ್ ಚಳ್ಳೇಹಣ್ಣು ತಿನ್ನಿಸಿತ್ತು.
ಆದರೆ, ಮಾಡಿದ್ದುಣ್ಣೋ ಮಾರಾಯ ಎಂಬಂತೆ ಜೆಡಿಎಸ್ ಅಂದು ನೀಡಿದ ಏಟಿಗೆ ಬಿಜೆಪಿ ಇಂದು ಸರಿಯಾದ ತಿರುಗೇಟು ನೀಡಿದೆ. ಅದು ತಾವೇ ಆಯ್ಕೆ ಮಾಡಿದ ಅಧ್ಯಕ್ಷ ಎಂ. ಚಂದ್ರೇಗೌಡರ ಮೂಲಕವೇ. ಅಂದಿನ ಮಾತುಕತೆಯಂತೆ ಉಳಿದಿರುವ 12 ತಿಂಗಳಲ್ಲಿ ಆರು ತಿಂಗಳಿಗೆ ಎಂ. ಚಂದ್ರೇಗೌಡ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಉಳಿದ ಸಮಯದಲ್ಲಿ ಹಿಂದುಳಿದ ವರ್ಗದವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಯೋಚನೆ ಜೆಡಿಎಸ್‌ದ್ದಾಗಿತ್ತು. ಆದರೆ, ನನ್ನ ಅಧಿಕಾರಾವಧಿಯಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗಿಲ್ಲ. ನನಗೆ ಇನ್ನು ಸ್ವಲ್ಪ ಸಮಯ ಅವಕಾಶ ಕೊಡಿ ಎಂದು ಮನವಿ ಮಾಡಿದ್ದರು. ಆದರೆ ಇದಕ್ಕೆ ಸಿಡಿದೆದ್ದ ದಳಪತಿಗಳು ಚಂದ್ರೇಗೌಡ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಲು ಸಜ್ಜಾಗಿ ಅದಕ್ಕೆ ವೇದಿಕೆಯನ್ನು ಸಿದ್ಧ ಮಾಡಿಕೊಂಡರು.
ಅದರಂತೆ ಏ.28ರಂದು ಚಂದ್ರೇಗೌಡ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದರು. ಆದರೆ 3/2 ಮತಗಳ ಬೆಂಬಲ ಜೆಡಿಎಸ್‌ಗೆ ಬೇಕಿತ್ತು. ಬಿಜೆಪಿ ಸದಸ್ಯರು ತಮಗೆ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸದಲ್ಲಿ ಇದ್ದರು. ಆದರೆ, ಮತ ಚಲಾವಣೆ ಪ್ರಕ್ರಿಯೆ ವೇಳೆ ಬಿಜೆಪಿ ಸದಸ್ಯರು ಚಂದ್ರೇಗೌಡರ ಪರ ವಿಶ್ವಾಸಕ್ಕೆ ಮತ ಹಾಕುವ ಮೂಲಕ ಜೆಡಿಎಸ್‌ಗೆ ಟಾಂಗ್ ನೀಡಿದರು. ಇವರ ಜತೆಗೆ ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್ ಸೇರಿದಂತೆ ಮತ್ತೋರ್ವ ಕಾಂಗ್ರೆಸ್ ಸದಸ್ಯೆ ಚಂದ್ರೇಗೌಡ ಅವರಿಗೆ ಮತ ಹಾಕಿದರು. ಇದರಿಂದಾಗಿ ಜೆಡಿಎಸ್‌ನ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿ, ಬಿಜೆಪಿ ಹಾಗೂ ಕಾಂಗ್ರೆಸ್‌ನ ಬಹಿರಂಗ ಬೆಂಬಲದಿಂದ ಚಂದ್ರೇಗೌಡರು ನಗರಸಭೆ ಅಧ್ಯಕ್ಷರಾಗಿ ಮುಂದುವರಿಯಲು ಅನುವು ಮಾಡಿಕೊಡಲಾಯಿತು.
ದಶಕಗಳಿಂದ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದ ಚಂದ್ರೇಗೌಡರಿಗೆ ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಅವರ ಕುಟುಂಬ ಶ್ರೀರಕ್ಷೆಯಂತೆ ಇತ್ತು. ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್ ಅವರು ಚಂದ್ರೇಗೌಡ ಅವರಿಗೆ ತಾವು ಸ್ಪರ್ಧಿಸುತ್ತಿದ್ದ ವಾರ್ಡ್ ಬಿಟ್ಟುಕೊಟ್ಟು ಅವರ ಗೆಲುವಿಗೆ ಅವಿರತ ಶ್ರಮಿಸಿದ್ದರು. ಹಾಲಿ ಶಾಸಕ ಎಚ್.ಎಸ್. ಸ್ವರೂಪ್ ಪ್ರಕಾಶ್ ಅವರು ಪಕ್ಷದ ಮುಖಂಡರ ಮಾತಿನ ಹೊರತಾಗಿಯೂ ಎಂ.ಚಂದ್ರೇಗೌಡ ಅವರು ಅಧ್ಯಕ್ಷರಾಗುವಂತೆ ಎಲ್ಲರ ಮನವೊಲಿಸಿದ್ದರು. ಆದರೆ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಈಗ ಎಲ್ಲವೂ ತಿರುವು ಮುರುವು ಆಗಿದೆ.
ಸದ್ಯ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲದಿಂದ ಅಧ್ಯಕ್ಷರಾಗಿ ಮುಂದುವರಿದಿರುವ ಎಂ. ಚಂದ್ರೇಗೌಡ ಅವರ ಮುಂದಿನ ನಡೆ ತೀವ್ರ ಕುತೂಹಲಕಾರಿಯಾಗಿದೆ. ಏಕೆಂದರೆ, ತಾವು ವಿಶ್ವಾಸ ಮತ ಗೆದ್ದ ತಕ್ಷಣ ತಮ್ಮ ಅಧ್ಯಕ್ಷರ ಕೊಠಡಿಯಲ್ಲಿ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರ ಫೋಟೋವನ್ನು ಹಾಕಿಸಿದ್ದು ಎಲ್ಲ ಹುಬ್ಬೇರುವಂತೆ ಮಾಡಿದೆ. ಇವರ ನಡೆ ಕಂಡು ಕೆಲವರು ಚಂದ್ರೇಗೌಡರು ಮುಂದೆ ಬಿಜೆಪಿ ಸೇರಬಹುದು ಎಂಬ ಅಭಿಪ್ರಾಯಗಳನ್ನು ಹೊರಹಾಕಿದರು. ಮುಂದಿನ ದಿನಗಳಲ್ಲಿ ಈ ಕುತೂಹಲಕ್ಕೆ ಚಂದ್ರೇಗೌಡ ಅವರೇ ತೆರೆ ಎಳೆಯುವ ನಿರೀಕ್ಷೆ ಇದೆ.