ಜಿಲ್ಲೆ

ಕೊನೆಗೂ ಬಂದ ಮಳೆರಾಯ, ರೈತರ ಮೊಗದಲ್ಲಿ ಸಂತಸ: ಹತ್ತಾರು ಮನೆಗಳಿಗೆ ನುಗ್ಗಿದ ನೀರು

ಹಾಸನ: ಮುಂಗಾರು ರಾಜ್ಯಕ್ಕೆ ಪ್ರವೇಶಿಸಿ ಹತ್ತು ದಿನಗಳಾಗಿದ್ದರೂ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಮಳೆ ಮಂಗಳವಾರ ಧಾರಾಕಾರವಾಗಿ ಸುರಿದಿದೆ. ನಗರದಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಇತ್ತಾದಾದರೂ ಮಳೆಯಾಗಿರಲಿಲ್ಲ. ಮಂಗಳವಾರ ಬೆಳಗ್ಗೆಯಿಂದಲೂ ಮೋಡ ಕವಿದು ಮಧ್ಯಾಹ್ನದ ನಂತರ ಗುಡುಗುಸಹಿತ ಧಾರಾಕಾರ ಮಳೆ ಸುರಿಯಿತು.

ಮಂಗಳವಾರ ಮಧ್ಯಾಹ್ನ 3 ಗಂಟೆಯ ನಂತರ ಸುರಿದ ಭರ್ಜರಿ ಮಳೆಯಿಂದಾಗಿ ನೀರಿಲ್ಲದೆ ಬಾಡುತ್ತಿದ್ದ ಆಲೂಗಡ್ಡೆ, ಮೆಕ್ಕೆಜೋಳ, ತಂಬಾಕು, ಶುಂಠಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ.

ತುಂಬಿ ಹರಿದ ರಸ್ತೆಗಳು, ಚರಂಡಿಗಳು

ಮೇಘಸ್ಫೋಟವಾದಂತೆ ಅಬ್ಬರಿಸಿದ ಮಳೆಯಿಂದ ಹಾಸನ ನಗರದ ಜನಜೀವನ ಕೆಲಕಾಲ ಅಸ್ತವ್ಯಸ್ತವಾಯಿತು. ವಾಹನ ಸವಾರರು, ವಿದ್ಯಾರ್ಥಿಗಳು, ಜನರು ಮಳೆಗೆ ಸಿಲುಕಿ ಪರದಾಡಿದರು. ಸುಮಾರು ಒಂದು ಗಂಟೆಗಳ ಕಾಲ ಸುರಿದ ಮಳೆಯಿಂದ ಅಂಗಡಿ ಮುಂಗಟ್ಟುಗಳಲ್ಲಿ ಜನರು ನಿಂತು ಆಶ್ರಯ ಪಡೆದರು.

ಸಾಮಾನ್ಯವಾಗಿ ಮುಂಗಾರು ಸಮಯದಲ್ಲಿ ನಗರಸಭೆಯಿಂದ ಚರಂಡಿ ಸ್ವಚ್ಛತೆ ಸೇರಿದಂತೆ ಇತರೆ ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಅಂತಹ ಯಾವ ಸಿದ್ಧತೆಗಳನ್ನು ಮಾಡಿಕೊಳ್ಳದೆ ಇರುವುದರಿಂದ ಚರಂಡಿಗಳು ತುಂಬಿ ನೀರು ರಸ್ತೆಯ ಮೇಲೆ ಹರಿಯಿತು. ರಸ್ತೆಯ ಕೆಲವೆಡೆ ನೀರು ನಿಂತ ಪರಿಣಾಮ ವಾಹನ ಸವಾರರಿಗೆ ಗುಂಡಿಗಳು, ರಸ್ತೆ ಉಬ್ಬುಗಳ ಕಾಣದೆ ಸವಾರರು ಪರದಾಡುವಂತಾಯಿತು.

ಕುವೆಂಪುನಗರದ ರಾಜಕಾಲುವೆಯಲ್ಲಿ ಹೂಳು ತುಂಬಿಕೊಂಡಿದ್ದರಿಂದ ಅಲ್ಲೂ ಪ್ರವಾಹದಂತೆ ನೀರು ಹರಿಯಿತು. ನಗರದ ವಿವಿಧೆಡೆ ಚರಂಡಿಗಳು ತುಂಬಿ ರಸ್ತೆಗೆ ಗಲೀಜು ನೀರು ಹರಿಯಿತು. ಬಿಸ್‌ಎನ್‌ಎನ್‌ಎಲ್ ರಸ್ತೆಯ ಮೇಲೆ ಸುಮಾರು ಒಂದು ಅಡಿಯಷ್ಟು ನೀರು ನಿಂತಿತ್ತು. ರಸ್ತೆಯ ಎರಡು ಬದಿ ನಿಲ್ಲಿಸಿದ್ದ ನೂರಾರು ವಾಹನಗಳ ಅರ್ಧ ಮಟ್ಟಕ್ಕೆ ನೀರು ತುಂಬಿತ್ತು. ಹಲವು ರಸ್ತೆಗಳಲ್ಲಿ ನೀರು ನಿಂತು ನೀರಿನ ನಡುವಲ್ಲಿಯೇ ವಾಹನಗಳು ಚಲಿಸುತ್ತಿರುವುದು ಕಂಡು ಬಂತು.

ಕಲ್ಯಾಣ ಮಂಟಪಮ ಮನೆಗಳಿಗೆ ನುಗ್ಗಿದ ನೀರು

ಮಳೆಯಿಂದ ಕಲ್ಯಾಣ ಮಂಟಪದೊಳಗೆ ನೀರು ನುಗ್ಗಿ ಮದುವೆಗೆ ಬಂದಿದ್ದ ಜನರು ಪರದಾಡಿದ ಘಟನೆ ಹಾಸನ ನಗರದ ಹೊಸಲೈನ್ ರಸ್ತೆಯಲ್ಲಿ ನಡೆದಿದೆ. ಎಂಎಸ್‌ಡಿ ಕಲ್ಯಾಣ ಮಂಟಪದೊಳಗೆ ನೀರು ನುಗ್ಗಿ ಅಪಾರ ಪ್ರಮಾಣದ ವಸ್ತುಗಳು ನೀರಿನಿಂದ ತೊಯ್ದು ಹಾನಿಯುಂಟಾಗಿದೆ. ಹೌಸಿಂಗ್ ಬೋರ್ಡ್‌ನಲ್ಲಿ ಮೂರು ಮನೆಗಳಿಗೆ ನೀರು ನುಗ್ಗಿದೆ. ಸಹ್ಯಾದ್ರಿ ವೃತ್ತದ ಬಳಿ ಅಂಗಡಿ ಮತ್ತು ಆಸ್ಪತ್ರೆಗೆ ನೀರು ನುಗ್ಗಿದೆ. ತಗ್ಗು ಪ್ರದೇಶವಾಗಿರುವ ವಿವೇಕನಗರ, ಹೊಯ್ಸಳ ನಗರ, ಉದಯಗಿರಿಯಲ್ಲಿ ಹತ್ತಾರು ಮನೆಗಳಿಗೆ ನೀರು ನುಗ್ಗಿದ್ದು, ಜನರು ಮನೆಯಿಂದ ನೀರನ್ನು ಹೊರಹಾಕಲು ಹರಸಾಹಸಪಡಬೇಕಾಯಿತು. ಹಲವು ಉದ್ಯಾನವನಗಳಲ್ಲಿ ನೀರು ತುಂಬಿತು.