ಜಿಲ್ಲೆ

ಕೊನೆಗೂ ಪೋಷಕ ಕಾಲುವೆಗಳ ದುರಸ್ತಿ

ರೈತರ ಪ್ರತಿಭಟನೆ, ಶಾಸಕರ ಸೂಚನೆ ಬಳಿಕ ಎಚ್ಚೆತ್ತ ಇಲಾಖೆ | ತಾಲೂಕಿನ ಕೆರೆಗಳಿಗೆ ಹರಿಯುತ್ತಿದೆ ನೀರು

 ಗೌರಿಬಿದನೂರು : ರೈತರ ಪ್ರತಿಭಟನೆ ಹಾಗೂ ಶಾಸಕರ ಸೂಚನೆ ಬಳಿಕ ಸಣ್ಣ ನೀರಾವರಿ ಇಲಾಖೆ ಎಚ್ಚೆತ್ತುಕೊಂಡಿದ್ದು, ಕಿಂಡಿ ಅಣೆಕಟ್ಟಿನ ಪೋಷಕ ಕಾಲುವೆಗಳ ದುರಸ್ತಿಗೆ ಮುಂದಾಗಿದೆ.

ಅಣೆಕಟ್ಟಿನ ಮೂಲಕ ಸಾಗುವ ಉತ್ತರ ಪಿನಾಕಿನಿ ನದಿಯ ನೀರು ಈ ಭಾಗದ ಮರಳೂರು, ಇಡಗೂರು, ಚಂದನದೂರು, ಯಾಕಾರ್ಲಾಹಳ್ಳಿ, ಕಡಗತ್ತೂರು, ತಿಂಗಳೂರು ಮುಂತಾದ ಗ್ರಾಮಗಳ ಕೆರೆಗಳಿಗೆ ಜೀವಕಳೆ ತರಲಿದೆ. ಆದರೆ, ಪೋಷಕ ಕಾಲುವೆಗಳು ಸುಸ್ಥಿತಿಯಲ್ಲಿ ಇಲ್ಲದ ಕಾರಣ ಕೆರೆಗಳಿಗೆ ನೀರು ಹರಿಯುತ್ತಿರಲಿಲ್ಲ. ಈ ಕೆರೆಗಳ ನಿರ್ವಹಣೆ ಎತ್ತಿನಹೊಳೆ ಯೋಜನೆ ವ್ಯಾಪ್ತಿಗೆ ಒಳಪಡುವುದರಿಂದ ಕಾಲುವೆಗಳ ದುರಸ್ತಿ ಬಗ್ಗೆ ಸಣ್ಣ ನೀರಾವರಿ ಇಲಾಖೆ ತಲೆಕೆಡಿಸಿಕೊಂಡಿರಲಿಲ್ಲ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಿಂಡಿ ಅಣೆಕಟ್ಟಿನ ಗೇಟ್‌ಗಳು ಸಂಪೂರ್ಣವಾಗಿ ಹಾಳಾಗಿದ್ದು, ನದಿಯಲ್ಲಿ ಹರಿಯುವ ನೀರು ನೆರೆ ರಾಜ್ಯ ಸೇರುತ್ತಿತ್ತು. ಕೆರೆಗೆ ಸಂಪರ್ಕ ಕಲ್ಪಿಸುವ ಕಾಲುವೆಯನ್ನು ದುರಸ್ತಿಗೊಳಿಸದ ಕಾರಣ ಕಾಲುವೆಗಳಲ್ಲಿ ಗಿಡಗಂಟಿ, ಪ್ಲಾಸ್ಟಿಕ್, ಬಾಟಲಿಗಳಿಂದ ತುಂಬಿಹೋಗಿದ್ದವು.

ರೈತರ ಪ್ರತಿಭಟನೆ

ತಾಲೂಕಿನಲ್ಲಿ ವಾರದಿಂದ ಸುರಿಯುತ್ತಿರುವ ಮಳೆಯಿಂದ ಉತ್ತರ ಪಿನಾಕಿನಿ ನದಿ ಉಕ್ಕಿ ಹರಿಯುತ್ತಿದೆ. ಆದರೆ ತಾಲೂಕಿನ ರೈತರಿಗೆ ಯಾವುದೇ ಉಪಯೋಗವಿಲ್ಲದೆ ಮಳೆ ನೀರು ನೆರೆಯ ಆಂಧ್ರಪ್ರದೇಶದ ಕಡೆಗೆ ಹರಿದು ಹೋಗುತ್ತಿರುವುದನ್ನು ಖಂಡಿಸಿ ರೈತರು ಪ್ರತಿಭಟನೆ ನಡೆಸಿದ್ದರಲ್ಲದೆ, ಇಡಗೂರು ಗ್ರಾಮದ ರೈತರು ಮರಳು ಮೂಟೆಗಳನ್ನು ಅಡ್ಡಗಟ್ಟಿ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಪ್ರಯತ್ನ ನಡೆಸಿದ್ದರು.

ತಹಸೀಲ್ದಾರ್ ಮಹೇಶ್ ಎಸ್. ಪತ್ರಿ ಸ್ಥಳಕ್ಕೆ ಭೇಟಿ ನೀಡಿ, ತಕ್ಷಣಕ್ಕೆ ಮರಳು ಮೂಟೆಗಳನ್ನು ನೀರಿಗೆ ಅಡ್ಡಲಾಗಿ ಅಳವಡಿಲಾಗುವುದು. ಕಾಲುವೆಯಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಿ ತಾತ್ಕಾಲಿಕವಾಗಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಕೂಡ ಕಿಂಡಿ ಅಣೆಕಟ್ಟಿಗೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಪೋಷಕ ಕಾಲುವೆಗಳನ್ನು ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಅಣೆಕಟ್ಟಿನ ಮೂರು ಗೇಟುಗಳಲ್ಲಿ ಮರಳಿನ ಮೂಟೆಗಳನ್ನು ಅಡ್ಡ ಇಟ್ಟು ಕೆರೆಗಳಿಗೆ ನೀರು ಹರಿಯುವಂತೆ ದುರಸ್ತಿ ಕೆಲಸವನ್ನು ಮಾಡಿಸುತ್ತಿದ್ದಾರೆ. ಇದರಿಂದ ಪೋಷಕ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಯುತ್ತಿದೆ. ಮಂಚೇನಹಳ್ಳಿ ಭಾಗದಲ್ಲಿ ಬುಧವಾರ ರಾತ್ರಿ ಉತ್ತಮ ಮಳೆಯಾಗಿರುವುದರಿಂದ ಪಿನಾಕಿನಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ನ.2ರಿಂದ ಈ ಭಾಗದಲ್ಲಿ ಮಳೆ ಹೆಚ್ಚಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ನದಿ ರಭಸ ಹೆಚ್ಚಾಗುವ ಸಾಧ್ಯತೆಯಿದೆ.

ಶಾಸಕರ ಮಾರ್ಗದರ್ಶನದಂತೆ ಕಿಂಡಿ ಅಣೆಕಟ್ಟೆಯಿಂದ ಕೆರೆಗಳಿಗೆ ನೀರು ಹರಿಸಲು ತಾತ್ಕಾಲಿಕವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. - ರೂಪಾ, ಅಭಿಯಂತ, ಸಣ್ಣ ನೀರಾವರಿ ಇಲಾಖೆ.