ಗುಂಡ್ಲುಪೇಟೆ: ಪಟ್ಟಣದ ಅಶ್ವಿನಿ ಬಡಾವಣೆಯಲ್ಲಿ ನಮ್ಮ ಕ್ಲಿನಿಕ್ ಶನಿವಾರದಿಂದ ಕಾರ್ಯಾರಂಭವಾಗಿದ್ದು, ಇದು ಬಡಾವಣೆ ನಿವಾಸಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಎರಡು ತಿಂಗಳ ಹಿಂದೆ ಉದ್ಘಾಟನೆಗೊಂಡ ನಮ್ಮ ಕ್ಲಿನಿಕ್ ಸಿಬ್ಬಂದಿ ಕೊರತೆ ನೆಪ ಹೇಳಿ ಮುಚ್ಚಲಾಗಿತ್ತು. ಈ ಬಗ್ಗೆ ಮೇ 14ರಂದು ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿಯಲ್ಲಿ ‘ಬಾಗಿಲು ತೆರೆಯದ ನಮ್ಮ ಕ್ಲಿನಿಕ್’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ತಾಲೂಕು ಆರೋಗ್ಯ ಅಧಿಕಾರಿಗಳು ಇದೀಗ ನಮ್ಮ ಕ್ಲಿನಿಕ್ ಅನ್ನು ಕಾರ್ಯಾರಂಭ ಮಾಡಿದ್ದಾರೆ.
ವಿಜಯವಾಣಿಯಲ್ಲಿ ಸವಿವರವಾಗಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಿಬ್ಬಂದಿ ಮುಖಾಂತರ ಕಟ್ಟಡವನ್ನು ಶುಚಿಗೊಳಿಸಿ ಕಾರ್ಯಾರಂಭ ಮಾಡಿದ್ದಾರೆ. ಇದರಿಂದ ಸಂತಸವಾಗಿದೆ ಎಂದು ಬಡಾವಣೆ ನಿವಾಸಿಗಳಾದ ಸೋಮಶೇಖರ್ ಹಾಗೂ ಭೈರೇಶ್ ಗಾಣಿಗ್ ಹಷರ್ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಚ್ಚಿದ್ದ ನಮ್ಮ ಕ್ಲಿನಿಕ್ ಅನ್ನು ತೆರೆಯಲು ಕಾರಣವಾದ ವಿಜಯವಾಣಿಗೆ ಧನ್ಯವಾದ ತಿಳಿಸಿದ್ದಾರೆ.