ಜಿಲ್ಲೆ

ಕೊತ್ತಲ ಆಂಜನೇಯ ರಥೋತ್ಸವ ಸಂಭ್ರಮ

ಕೂಡ್ಲಿಗಿ: ಪಟ್ಟಣದ ಆರಾಧ್ಯ ದೈವ ಶ್ರೀ ಕೊತ್ತಲ ಆಂಜನೇಯ ರಥೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು.

ರಥೋತ್ಸವ ಅಂಗವಾಗಿ ಭಾನುವಾರ ಬೆಳಗ್ಗೆ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ರಜತ ಕವಚ ಧಾರಣೆಯ ಅಲಂಕಾರ ಸೇವೆ, ಅಷ್ಟಾವಧಾನ, ಮಹಾ ಮಂಗಳಾರತಿ, ಮಧ್ಯಾಹ್ನ ರಥಾಂಗ ಹೋಮ, ಪೂರ್ಣಾಹುತಿ ಹಾಗೂ ಬ್ರಹ್ಮ ರಥೋತ್ಸವ ಜರುಗಿತು. ಪಟ್ಟಣದ ಹನುಮ ಭಕ್ತರು ನೆರೆದಿದ್ದ ನೂರಾರು ಜನರಿಗೆ ಪಾನಕ, ಕೋಸಂಬರಿ ವಿತರಣೆ ಮಾಡಿದರು.

ಸಂಜೆ ರಥಕ್ಕೆ ಭಕ್ತರು ಬೃಹತ್ ಹೂವಿನ ಹಾರಗಳು, ಬಾಳೆಕಂಬ, ತೆಂಗಿನಕಾಯಿ ಹಾಗೂ ತಳಿರು ತೋರಣಗಳನ್ನು ಕಟ್ಟಿ ಭಕ್ತಿ ಮೆರೆದರು. ಕಳೆದ ಬಾರಿ ಸ್ವಾಮಿಯ ಪಟವನ್ನು 8 ಲಕ್ಷ ರೂಪಾಯಿಗೆ ಪಡೆದಿದ್ದ ಗುತ್ತಿಗೆದಾರ ಎಂ.ಬಿ. ಸುನೀಲ್ ಕುಟುಂಬದವರು ವಿವಿಧ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಹಣ ಹಾಗೂ ಪಟವನ್ನು ಸ್ವಾಮಿಗೆ ಒಪ್ಪಿಸಿದರು.

ನಂತರ ಈ ವರ್ಷ ನಡೆದ ಪಟ ಹರಾಜಿನಲ್ಲಿ ಎಂ.ಬಿ.ಸುನೀಲ್ ನಾಲ್ಕು ಲಕ್ಷದ ಒಂದು ಸಾವಿರದ ಒಂದು ನೂರ ಒಂದು ರೂಪಾಯಿಗೆ ಪಡೆದರು. ನಂತರ ಸ್ವಾಮಿಯ ಉತ್ಸವ ಮೂರ್ತಿಯನ್ನು ಹೂವಿನ ಅಲಂಕಾರದ ಪಲಕ್ಕಿಯಲ್ಲಿ ಹೊತ್ತು ತಂದ ಭಕ್ತರು, ರಥಕ್ಕೆ ಮೂರು ಬಾರಿ ಪ್ರದಕ್ಷಿಣೆ ಮಾಡಿಸಿ ರಥದಲ್ಲಿ ಪ್ರತಿಷ್ಠಾಪಿಸಿದರು.

ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ರಥವನ್ನು ಪಾದಗಟ್ಟೆವರೆಗೂ ಎಳೆದ ಭಕ್ತರು, ಮಹಾ ಮಂಗಳಾರತಿ ಮಾಡಿ ಮತ್ತೆ ಮೂಲ ಸ್ಥಾನಕ್ಕೆ ತಂದು ನಿಲ್ಲಿಸಿದರು.