ಜಿಲ್ಲೆ

ಕೊಣನೂರು ಗ್ರಾಪಂಗೆ ಇಂದು ಚುನಾವಣೆ

ಕೊಣನೂರು ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆಯೊಂದರಲ್ಲಿ ನಿಯೋಜಿಸಿರುವ ಸಿಬ್ಬಂದಿ.

Hassan

ಅರಕಲಗೂಡು: ತಾಲೂಕಿನ ಕೊಣನೂರು ಗ್ರಾಮ ಪಂಚಾಯಿತಿಗೆ ಅ.28ರಂದು ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಚುನಾವಣಾ ಅಖಾಡ ರಾಜಕೀಯ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.


ಪಂಚಾಯಿತಿಯ 13 ವಾರ್ಡ್‌ಗಳಲ್ಲಿ ಒಟ್ಟು 21 ಸ್ಥಾನಗಳಿಗೆ ನಡೆಯುವ ಚುನಾವಣೆಗೆ 82 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಮತದಾರರನ್ನು ಒಲಿಸಿಕೊಳ್ಳಲು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದು, ಬಡಾವಣೆಗಳಲ್ಲಿ ಸುತ್ತಾಟ ನಡೆಸಿ ದಿನನಿತ್ಯ ಬೆವರು ಸುರಿಸುತ್ತಿದ್ದಾರೆ.


ತಾಲೂಕಿನಲ್ಲಿ ಅರಕಲಗೂಡು ಬಿಟ್ಟರೆ ಕೊಣನೂರು ಎರಡನೇ ದೊಡ್ಡ ಪಟ್ಟಣವಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 6500 ಮತದಾರರು ಇದ್ದಾರೆ. ಕೊಣನೂರು ಪಟ್ಟಣದೊಂದಿಗೆ ಪಕ್ಕದ ಗೊರದಿಣ್ಣೆ, ನಂದಿಗೌಡನಕೊಪ್ಪಲು, ಕೆರೆಕೋಡಿ ಗ್ರಾಮಗಳನ್ನು ಪಂಚಾಯಿತಿ ವ್ಯಾಪ್ತಿಗೆ ಒಳಪಡಿಸಲಾಗಿದೆ. ಪಟ್ಟಣ ಮಾತ್ರವಲ್ಲದೆ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿಯೂ ಚುನಾವಣೆಯ ರಂಗು ಕಳೆಗಟ್ಟಿದೆ.


ಹಿಂದೊಮ್ಮೆ ಪುರಸಭೆಯಾಗಿದ್ದ ಕೊಣನೂರು ಮಧ್ಯಂತರ ಅವಧಿಯಲ್ಲಿ ಮಂಡಲ ಪಂಚಾಯಿತಿಯಾಗಿ, ತದನಂತರ ಗ್ರಾಮ ಪಂಚಾಯಿತಿಯಾಗಿ ಹಿಂಬಡ್ತಿ ಪಡೆಯಿತು. ಅಭಿವೃದ್ಧಿ ಕಾರ್ಯಗಳ ದೃಷ್ಟಿಕೋನದಿಂದ ನೋಡಿದರೆ ಊರಿನ ಬೆಳವಣಿಗೆ ಅಷ್ಟಕ್ಕಷ್ಟೆ. ಒಂದು ಕಾಲಕ್ಕೆ ವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗಿದ್ದ ಕೊಣನೂರು ಪ್ರಗತಿಗೂ ಈಗ ಹೊಡೆತ ಬಿದ್ದಿದೆ. ಹೀಗಾಗಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕು ಎನ್ನುವ ಸ್ಥಳೀಯರು ಹಲವು ದಶಕಗಳ ಕೂಗು ಈಡೇರದೆ ಇಂದಿಗೂ ಜನರ ಕನಸು ಕನಸಾಗಿಯೇ ಉಳಿದಿದೆ. ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸುವಂತೆ ಗ್ರಾಮಸ್ಥರು ಈ ಹಿಂದೆ ಹಲವು ಸಲ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ್ದಾರೆ. ಆರು ತಿಂಗಳ ಹಿಂದೆ ಘೋಷಣೆಯಾಗಿದ್ದ ಚುನಾವಣೆಯನ್ನೂ ಗ್ರಾಮಸ್ಥರು ಬಹಿಷ್ಕರಿಸಿದ್ದರು. ಇದೀಗ ಮತ್ತೆ ಚುನಾವಣೆ ನಡೆಯುತ್ತಿದ್ದು ಅಖಾಡ ಭಾರಿ ಪೈಪೋಟಿಯಿಂದ ಕೂಡಿದೆ.