ಜಿಲ್ಲೆ

ಕೊಣನೂರು ಗ್ರಾಪಂ ಚುನಾವಣೆ ಮುಂದೂಡಿ : ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಚ್.ಯೋಗಾರಮೇಶ್ ಆಗ್ರಹ



ಹಾಸನ: ಮತದಾರರ ಪಟ್ಟಿಯಲ್ಲಿ ವ್ಯಾಪಕ ಲೋಪ-ದೋಷಗಳಿರುವ ಕಾರಣ ತಾಲೂಕಿನ ಕೊಣನೂರು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದೂಡಬೇಕು. ಮತದಾರರಿಗೆ ಅನ್ಯಾಯವಾಗದಂತೆ ಶಾಸಕರು ಎಚ್ಚರ ವಹಿಸಬೇಕು ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಚ್.ಯೋಗಾರಮೇಶ್ ಆಗ್ರಹಿಸಿದರು.


ಕೊಣನೂರು ಗ್ರಾಮ ಪಂಚಾಯಿತಿಗೆ 2021ರಲ್ಲೇ ಚುನಾವಣೆ ನಿಗದಿಯಾಗಿತ್ತು, ಮತದಾರರ ಪಟ್ಟಿಯಲ್ಲಿ ಹಾಗೂ ವಾರ್ಡ್‌ವಾರು ಅಭ್ಯರ್ಥಿಗಳ ನಿಗದಿ ಮಾಡುವಲ್ಲಿ ಕಂಡುಬಂದ ವ್ಯಾಪಕ ದೋಷಗಳನ್ನು ಖಂಡಿಸಿ ಪಕ್ಷಾತೀತವಾಗಿ ಮುಖಂಡರು ಪ್ರತಿಭಟನೆ ನಡೆಸಿ, ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣೆಯನ್ನು ಮುಂದೂಡಲಾಗಿತ್ತು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಬೇರೆ ವಾರ್ಡ್‌ಗಳ ಮತದಾರರ ಹೆಸರನ್ನು ಅಕ್ರಮವಾಗಿ ಇನ್ನೊಂದು ವಾರ್ಡ್‌ನ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದಲ್ಲದೆ, 200 ರಿಂದ 250 ಮತದಾರರಿರುವ ವಾರ್ಡ್‌ಗಳಿಗೆ ಇಬ್ಬರು ಅಭ್ಯರ್ಥಿಗಳು ಹಾಗೂ 800 ರಿಂದ 1000 ಸಾವಿರ ಮತದಾರರು ಇರುವ ಕಡೆ ಒಬ್ಬರೆ ಅಭ್ಯರ್ಥಿಯನ್ನು ನಿಗದಿ ಮಾಡಲಾಗಿತ್ತು. ಇದರಿಂದ ಪರಿಶಿಷ್ಟ ಜನಾಂಗಕ್ಕೆ ಹೆಚ್ಚಿನ ಅನ್ಯಾಯವಾಗಿತ್ತು. ಪ್ರತಿಭಟನೆಯಿಂದ ಎಚ್ಚೆತ್ತ ಜಿಲ್ಲಾಧಿಕಾರಿಗಳು ಸಕಲೇಶಪುರ ಉಪವಿಭಾಗಾಧಿಕಾರಿಗಳಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಉಪ ವಿಭಾಗಾಧಿಕರಿಗಳು ತನಿಖೆ ನಡೆಸಿ ಲೋಪಗಳ ಕುರಿತು ವರದಿ ನೀಡಿದ್ದರಲ್ಲದೆ ತಪ್ಪುಗಳನ್ನು ಸರಿಪಡಿಸಲು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ವಾರ್ಡ್‌ವಾರು ಅಭ್ಯರ್ಥಿಗಳ ನಿಗದಿಗೆ ಅನುಸರಿಸಬೇಕಾದ ಮಾನದಂಡಗಳನ್ನು ವರದಿಯಲ್ಲಿ ಸೂಚಿಸಿದ್ದು, ಇದನ್ನು ಎಲ್ಲರೂ ಒಪ್ಪಿದ್ದರು ಎಂದು ಹೇಳಿದರು.


ಈ ತಿಂಗಳ 28ಕ್ಕೆ ಗ್ರಾಮ ಪಂಚಾಯಿತಿಗೆ ಚುನಾವಣೆ ನಿಗದಿಯಾಗಿದೆ. ಆದರೆ ಎಸಿಯವರು ನೀಡಿದ ವರದಿಯನ್ನು ಸಂಪೂರ್ಣ ತಿರಸ್ಕರಿಸಿ, ಈ ಹಿಂದೆ ನಿಗದಿಯಾಗಿದ್ದ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಲು ಮುಂದಾಗಿದ್ದು ಇದು ಖಂಡನೀಯ. ಲೋಪವನ್ನೆ ಮುಂದುವರಿಸಿದಲ್ಲಿ ಜನರ ಹೋರಾಟಕ್ಕೆ ಸಿಕ್ಕ ಪ್ರತಿಫಲವಾದರೂ ಏನು? ಮತದಾರರ ಪಟ್ಟಿಯಲ್ಲಿನ ಲೋಪಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಶಾಸಕರು ಧ್ವನಿ ಎತ್ತದೆ ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.


ಹೆಚ್ಚಿನ ಜನಸಂಖ್ಯೆ ಇದ್ದರೂ ಗ್ರಾಪಂ:
ತಾಲೂಕಿನಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿದ ಎರಡನೇ ದೊಡ್ಡ ಪಟ್ಟಣವಾದ ಕೊಣನೂರಿನಲ್ಲಿ ಈ ಹಿಂದೆ ಪುರಸಭೆ ಇತ್ತು. ಆದರೆ, ಇದನ್ನು ಗ್ರಾಮ ಪಂಚಾಯಿತಿಯಾಗಿ ಮಾರ್ಪಾಡು ಮಾಡಲಾಗಿದೆ. ಇಷ್ಟು ದೊಡ್ಡ ಪಟ್ಟಣವನ್ನು ಗ್ರಾಪಂಗೆ ನೀಡುವ ಅನುದಾನದಿಂದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲದೆ ಪಟ್ಟಣ ತೀರಾ ಹಿಂದುಳಿಯುವಂತಾಗಿದೆ. ಈ ಕುರಿತು ಹಾಲಿ ಮತ್ತು ಮಾಜಿ ಶಾಸಕರು ಧ್ವನಿ ಎತ್ತದೆ ಜಾಣಕುರುಡು ಪ್ರದರ್ಶಿಸಿ ಜನತೆಗೆ ಕಂಟಕವಾಗಿದ್ದಾರೆ ಎಂದು ಕಿಡಿಕಾರಿದರು.


ತಾವು ಸಚಿವ ಎಂಟಿಬಿ ನಾಗರಾಜ್ ಅವರನ್ನು ಭೇಟಿ ಮಾಡಿ ಕೊಣನೂರು ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸುವಂತೆ ಮನವಿ ಮಾಡಿದ ಪರಿಣಾಮ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಈ ಕುರಿತು ಇದುವರೆಗೂ ಸರ್ಕಾರಕ್ಕೆ ಸೂಕ್ತ ವರದಿ ಹೋಗಿಲ್ಲ. ಈ ಬಗ್ಗೆ ಶಾಸಕ ರಾಮಸ್ವಾಮಿ ಒಮ್ಮೆಯೂ ಅಧಿಕಾರಿಗಳನ್ನು ಪ್ರಶ್ನಿಸಿಲ್ಲ. ಇತರ ವಿಷಯಗಳ ಕುರಿತು ತರಾತುರಿ ತೋರುವ ಶಾಸಕರು ಇಂತಹ ಪ್ರಮುಖ ವಿಚಾರದ ಕುರಿತು ದಿವ್ಯ ನಿರ್ಲಕ್ಷ ತೋರುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಉಪ ವಿಭಾಗಾಧಿಕಾರಿಗಳ ವರದಿ ಆಧರಿಸಿ ಲೋಪಗಳನ್ನು ಸರಿಪಡಿಸಬೇಕು ಹಾಗೂ ಗ್ರಾಪಂ ಅನ್ನು ಪಪಂ ಆಗಿ ಪರಿಪರ್ತಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಪಿ.ಟಿ. ಕೇಶವೇಗೌಡ, ಸೂರ್ಯನಾರಾಯಣ, ರವಿ, ಇಸ್ಮಾಯಿಲ್ ವಾಸಿಮ್, ಪ್ರಸನ್ನ ಗೋಷ್ಠಿಯಲ್ಲಿದ್ದರು.