ಚಿಕ್ಕಬಳ್ಳಾಪುರ: ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯ ಜನರಲ್ಲಿನ ನಿರೀಕ್ಷೆಯ ಬೇಡಿಕೆಗಳಿಗೆ ಸಂಬಂಧಿಸಿದಂತೆ ಹಲವು ಘೋಷಣೆಯಾಗದಿದ್ದರೂ ವಿಶೇಷ ಕೊಡುಗೆಗಳಂತೂ ಸಿಕ್ಕಿರುವುದು ತೃಪ್ತಿಪಡುವಂತಾಗಿದೆ.ಪ್ರತಿ ವರ್ಷದಂತೆ ಸಹಜವಾಗಿ ಈ ಬಾರಿಯೂ ನಿರೀಕ್ಷೆ ದೊಡ್ಡದಾಗಿತ್ತು. ಇದಕ್ಕೆ ಸರ್ಕಾರದ ಮೇಲೆ ಸ್ಥಳೀಯ ಜನಪ್ರತಿನಿಧಿಗಳು ಒತ್ತಡ ಹೇರಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಕೊಡುಗೆಗಳ ಘೋಷಣೆಯ ಮೂಲಕ ಜಿಲ್ಲೆಯನ್ನು ತೃಪ್ತಿಪಡಿಸಲು ಯತ್ನಿಸಿದ್ದಾರೆ.
ಜಿಲ್ಲೆಯ ಪ್ರಮುಖ ಬೇಡಿಕೆ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಆದ್ಯತೆ ನೀಡಿದ ಸಿಎಂ, ಎತ್ತಿನಹೊಳೆ ಯೋಜನೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿ ಕಾಮಗಾರಿ ಚುರುಕುಗೊಳಿಸುತ್ತಿರುವುದನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಯೋಜನೆಯ ಪ್ರಥಮ ಹಂತದ ಕಾಮಗಾರಿಗಳಿಗೆ ಪ್ರಾಯೋಗಿಕವಾಗಿ ಚಾಲನೆ, ಎರಡನೇ ಹಂತದಡಿ ಗೌರಿಬಿದನೂರು ಸೇರಿ ಅಗತ್ಯವಿರುವೆಡೆ ಫೀಡರ್ ಕಾಲುವೆ ಕಾಮಗಾರಿ ಪೂರ್ಣ ಮತ್ತು ಮುಂದಿನ ಮುರ್ಷದ ಮುಂಗಾರು ಅವಧಿಯಲ್ಲಿ ನೀರು ಪೂರೈಕೆಯ ಘೋಷಣೆ ಮಾಡಿದ್ದಾರೆ. ಜತೆಗೆ ಯೋಜನೆಗೆ 3 ಸಾವಿರ ಕೋಟಿ ರೂ. ಒದಗಿಸಿದ್ದು, ಇದು ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಿದ್ದರೂ ನೆರವು ಸಿಕ್ಕಿದೆ ಎಂಬುದೇ ಖುಷಿ ವಿಚಾರ.
ಉತ್ತಮ ಸಾಧನೆಯ ನಿರೀಕ್ಷೆ: ಗುಡಿ ಕೈಗಾರಿಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ಚರ್ಮದ ಬೊಂಬೆ ಮೈಕ್ರೋ ಕ್ಲಸ್ಟರ್ ಅಭಿವೃದ್ಧಿ, ಇನ್ನು ಪ್ರತಿ ವರ್ಷ ಮಾ.27ರಂದು ಯೋಗೀನಾರೇಯಣ ಯತೀಂದ್ರರ ಜಯಂತಿಯನ್ನು ಸರ್ಕಾರದಿಂದ ಆಯೋಜನೆಯು ಕಾಲಜ್ಞಾನಿ ತಪೋಭೂಮಿ ಕೈವಾರ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದೆ. ಉಳಿದಂತೆ ಬೆಂಗಳೂರು ನಗರದ ವೃಷಭಾವತಿ ಕಣಿವೆಯಿಂದ ಸಂಸ್ಕರಿಸಿದ ನೀರು ಪೂರೈಕೆಗೆ ಮೊದಲ ಹಂತದಲ್ಲಿ 865 ಕೋಟಿ ರೂ ಒದಗಿಸಿದ್ದು, ಕಳೆದ ಬಾರಿ 500 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ, ಯಾವುದೇ ಪ್ರಗತಿ ಕಂಡು ಬಂದಿಲ್ಲ. ಮುಂಬರುವ ದಿನಗಳಲ್ಲಾದರೂ ಉತ್ತಮ ಸಾಧನೆಯ ನಿರೀಕ್ಷೆ ಹೊಂದಲಾಗಿದೆ. ಮತ್ತೊಂದೆಡೆ ಈಗಾಗಲೇ ಪ್ರಾಯೋಗಿಕವಾಗಿ ಚಾಲನೆ ಪಡೆದುಕೊಂಡಿರುವ ಮೆದುಳು ಆರೋಗ್ಯ ಕಾರ್ಯಕ್ರಮ, ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿರುವ ಖಾಸಗಿ ಸಹಭಾಗಿತ್ವದಲ್ಲಿ ನಂದಿ ಬೆಟ್ಟದಲ್ಲಿ ರೋಪ್ ವೇ ಅಳವಡಿಸಲು 93 ಕೋಟಿ ರೂ.ವೆಚ್ಚದ ಯೋಜನೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಸಾಕಾರಗೊಳ್ಳದ ನಿರೀಕ್ಷೆಗಳು: ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚನೆ ಮತ್ತು ಅನುದಾನ ಮಂಜೂರಾತಿಯ ಭರವಸೆಯು ಬಜೆಟ್‌ನಲ್ಲಿ ಘೋಷಣೆಯಾಗಿಲ್ಲ. ಉಳಿದಂತೆ ಪ್ರವಾಸೋದ್ಯಮದ ಅಭಿವೃದ್ಧಿಗೆ ನಂದಿ ಅಭಿವೃದ್ಧಿ ಪ್ರಾಧಿಕಾರದ ರಚನೆಯ ಪ್ರಸ್ತಾಪವೇ ಇಲ್ಲ. ಈಗಾಗಲೇ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಚೇಳೂರು ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಮಂಚೇನಹಳ್ಳಿಯನ್ನು ಹೊಸ ತಾಲೂಕನ್ನಾಗಿ ಘೋಷಿಸಲಾಗಿದೆ. ಇಲ್ಲಿ ಪ್ರತ್ಯೇಕ ತಾಲೂಕು ಆಡಳಿತ ವ್ಯವಸ್ಥೆ ಅಸ್ತಿತ್ವ ಮತ್ತು ಹೊಸ ತಾಲೂಕು ಮಟ್ಟದ ಕಚೇರಿಗಳ ನಿರ್ಮಾಣಕ್ಕೆ ವಿಶೇಷ ಅನುದಾನ ಸಿಕ್ಕಿಲ್ಲ. ಶಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿಯನ್ನು ಪ್ರತ್ಯೇಕ ತಾಲೂಕನ್ನಾಗಿ ರಚಿಸಬೇಕೆಂಬ ಒತ್ತಾಯಕ್ಕೆ ಮನ್ನಣೆ ಸಿಕ್ಕಿಲ್ಲ.
ಘೋಷಣೆಯಾಗದ ಉಪ ನಗರ: ಹಿಂದಿನಿಂದಲೂ ಬೆಂಗಳೂರಿಗೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರವನ್ನು ಉಪ ನಗರವನ್ನಾಗಿ ಘೋಷಿಸಿ, ರಾಜಧಾನಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಭರವಸೆ ನೀಡುತ್ತಿದ್ದರೂ ಪೂರಕವಾದ ಯಾವುದೇ ಕೊಡುಗೆ ಸಿಕ್ಕಿಲ್ಲ. ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯನ್ನೊಳಗೊಂಡಂತೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಟ್ಟಡ ನಿರ್ಮಾಣಕ್ಕೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಬಳಿ ಅಗತ್ಯವಿರುವ ಭೂಮಿ ಸ್ವಾಧೀನ ಮತ್ತು ಕಾಮಗಾರಿ, ನಾಲೇಜ್ ಸಿಟಿ ನಿರ್ಮಾಣ ಅನುದಾನ ಬಿಡುಗಡೆ ಸಾಕಾರಗೊಂಡಿಲ್ಲ.
ಬಜೆಟ್ ಹೊಸ ಕೊಡುಗೆಗಳು: ವೇತನ, ವಹಿವಾಟು, ಉದ್ಯೋಗ ಮತ್ತು ರಫ್ತು ಹೆಚ್ಚಳ ಗುರಿಯೊಂದಿಗೆ ಚಿಕ್ಕಬಳ್ಳಾಪುರದಲ್ಲಿ ಚರ್ಮದ ಬೊಂಬೆ ಮೈಕ್ರೋ ಕ್ಲಸ್ಟರ್, ಶಿಡ್ಲಘಟ್ಟದಲ್ಲಿ ಸೀರೆ ಮೈಕ್ರೋ ಕ್ಲಸ್ಟರ್ ಅಭಿವೃದ್ಧಿ
*ಎತ್ತಿನಹೊಳೆ ನೀರಿನ ಕುಡಿಯುವ ನೀರಿನ ಯೋಜನೆಯ ಪ್ರಥಮ ಹಂತದ ಕಾಮಗಾರಿಗಳಿಗೆ ಪ್ರಸಕ್ತ ಸಾಲಿನಲ್ಲಿ ಪ್ರಾಯೋಗಿಕವಾಗಿ ಚಾಲನೆ ಮತ್ತು ಎರಡನೇ ಹಂತದಡಿ ಗೌರಿಬಿದನೂರು ಸೇರಿ ಅಗತ್ಯವಿರುವೆಡೆ ಫೀಡರ್ ಕಾಲುವೆ ಕಾಮಗಾರಿ ಪೂರ್ಣ. ಮುಂದಿನ ವರ್ಷದ ಮುಂಗಾರು ಅವಧಿಯಲ್ಲಿ ನೀರು ಪೂರೈಕೆ. ಯೋಜನೆಗೆ 3 ಸಾವಿರ ಕೋಟಿ ರೂ ಮಂಜೂರು.
* ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದ ಶ್ರೀಯೋಗೀನಾರೇಯಣ ಯತೀಂದ್ರರ ಜಯಂತಿ ಆಚರಿಸುವುದಾಗಿ ಘೋಷಣೆ.
ಬಜೆಟ್‌ನಲ್ಲಿ ಹಳೇ ಘೋಷಣೆಗಳ ಪ್ರಸ್ತಾಪ * ಬೆಂಗಳೂರು ನಗರದ ವೃಷಬಾವತಿ ಕಣಿವೆಯಿಂದ ಸಂಸ್ಕರಿಸಿದ 300 ದಶ ಲಕ್ಷ ಲೀಟರ್ ನೀರನ್ನು ಚಿಕ್ಕಬಳ್ಳಾಪುರ ಸೇರಿ ಇತರ ಜಿಲ್ಲೆಗಳ 234 ಕೆರೆಗಳಿಗೆ ನೀರು ಹರಿಸುವ ಯೋಜನೆಯಡಿ ಮೊದಲ ಹಂತದಲ್ಲಿ 865 ಕೋಟಿ ರೂ. * ಸಾಮಾನ್ಯ ಜನರ ಮೆದುಳಿನ ಆರೋಗ್ಯವನ್ನು ಕಾಪಾಡಲು, ಜಾಗೃತಿಗಾಗಿ ನಿಮ್ಹಾನ್ಸ್ ಬೆಂಬಲದೊಂದಿಗೆ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ ಮೆದುಳು ಆರೋಗ್ಯ ಕಾರ್ಯಕ್ರಮ. * ಖಾಸಗಿ ಸಹಭಾಗಿತ್ವದಲ್ಲಿ ನಂದಿ ಬೆಟ್ಟದಲ್ಲಿ ರೋಪ್ ವೇ ಅಳವಡಿಸಲು 93 ಕೋಟಿ ರೂ ವೆಚ್ಚದ ಯೋಜನೆಗೆ ಅನುಮೋದನೆ.
ಇದೊಂದು ನಿರಾಶದಾಯಕ ಬಜೆಟ್, ತಾಲೂಕಿನ ಬಹುತೇಕ ರೇಷ್ಮೆ ಬೆಳೆಗಾರರು ಮಿಶ್ರ ತಳಿ ಗೂಡು ಬೆಳೆಯುತ್ತಾರಾದರೂ ಸರ್ಕಾರ ಕೇವಲ ದ್ವಿತಳಿ ಗೂಡಿಗೆ ಪ್ರೋತ್ಸಾಹಧನ ಘೋಷಿಸಿದೆ. ಇದರಿಂದ ಈ ಭಾಗದ ಯಾವುದೇ ರೇಷ್ಮೆ ಬೆಳೆಗಾರರಿಗೂ ಉಪಯೋಗವಿಲ್ಲ. ಇನ್ನು ರೀಲರ್‌ಗಳಿಗೆ ಪ್ರೋತ್ಸಾಹಧನ ನೀಡುತ್ತೇವೆ ಎಂದು ಹೇಳಿದ್ದರಾದರೂ ಎಷ್ಟು? ಎನ್ನುವುದನ್ನು ನಿಖರವಾಗಿ ಹೇಳಿಲ್ಲ. ಜಿಲ್ಲೆಯ ಕೆರೆಗಳನ್ನು ತುಂಬಿಸಲು ಜಾರಿಗೆ ತಂದಿರುವ ಎಚ್.ಎನ್ ವ್ಯಾಲಿ ಯೋಜನೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವೇ ಇಲ್ಲ. ವಿ.ಮುನಿಯಪ್ಪ. ಶಾಸಕರು, ಶಿಡ್ಲಘಟ್ಟ **** ರಾಜ್ಯ ಸರ್ಕಾರವು ನೀರಾವರಿ ಯೋಜನೆಗಳ ಅನುಷ್ಠ್ಠಾನಕ್ಕೆ ಬದ್ಧತೆ ತೋರದಿರುವಿಕೆಯು ನಿರಾಶಾದಾಯಕ ಬಜೆಟ್‌ನಿಂದ ತಿಳಿದು ಬರುತ್ತದೆ. ಎತ್ತಿನಹೊಳೆ ಯೋಜನೆಯ ಹಳೇ ಕಾಮಗಾರಿಗಳ 3500 ಕೋಟಿ ರೂ.ಹಣವನ್ನೇ ಬಾಕಿ ಉಳಿಸಿಕೊಳ್ಳಲಾಗಿದೆ. ಈಗ ಮತ್ತೆ 3 ಸಾವಿರ ಕೋಟಿ ರೂ.ಯೋಜನೆಗೆ ಮೀಸಲಿಡಲಾಗಿದೆ. ಇದು ಜನರ ಮೂಗಿಗೆ ತುಪ್ಪ ಸವರುವ ಕೆಲಸ. 2 ವರ್ಷಗಳಲ್ಲಿ ಯೋಜನೆ ಅನುಷ್ಠಾನದ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆ ಇ್ಲ. ಮುಖ್ಯಮಂತ್ರಿ ತವರು ಜಿಲ್ಲೆ ಹಾಗೂ ಉತ್ತರ ಕರ್ನಾಟಕ ಭಾಗದ ಕಡೆಗೆ ನೀಡಿದ ಆಸಕ್ತಿಯನ್ನು ನಮ್ಮ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಕಡೆಗೆ ತೋರಿಲ್ಲ. ಎನ್.ಎಚ್.ಶಿವಶಂಕರೆಡ್ಡಿ, ಗೌರಿಬಿದನೂರು ಶಾಸಕ,