ಜಿಲ್ಲೆ

ಕೊಡಸೋಗೆಯಲ್ಲಿ ಬಾಳೆ ಬೆಳೆ ಕ್ಷೇತ್ರೋತ್ಸವ

ಗುಂಡ್ಲುಪೇಟೆ: ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಮಂಗಳವಾರ ಬಾಳೆ ಬೆಳೆ ಕ್ಷೇತ್ರೋತ್ಸವ ನಡೆಯಿತು.

ಗ್ರಾಮದ ರೈತ ನಾಗರಾಜ ಅವರ ಜಮೀನಿನಲ್ಲಿ ಆಯೋಜಿಸಿದ್ದ ಕ್ಷೇತ್ರೋತ್ಸವದಲ್ಲಿ ಗುಂಡ್ಲುಪೇಟೆ ತೋಟಗಾರಿಕೆ ಸಿಬ್ಬಂದಿ ಕುಮಾರ್ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಮತ್ತು ಸಸ್ಯರೋಗ ತಜ್ಞ ಡಾ. ಪಂಪನಗೌಡ ಮಾತನಾಡಿ, ಬೆಳೆಯಲ್ಲಿ ಪನಾಮ ಸೋಂಕು ರೋಗವು ಪ್ರಮುಖವಾಗಿದ್ದು, ವಿವಿಧ ಹಂತಗಳಲ್ಲಿ ಕಂಡುಬರುತ್ತದೆ. ಇತ್ತೀಚೆಗೆ ರೈತರು ಈ ರೋಗ ನಿರ್ವಹಣೆ ಮಾಡುವುದು ಕಷ್ಟ ಸಾಧ್ಯ ಎನ್ನುತ್ತಾರೆ. ಆದ್ದರಿಂದ ರೈತರಿಗೆ ಬಾಳೆಯ ಬೆಳೆಯುವ ವೈಜ್ಞಾನಿಕ ಪದ್ಧತಿಗಳಾದ ರೋಗ ರಹಿತ ತೋಟಗಳಿಂದ ಕಂದು ಆಯ್ಕೆ, ಐಸಿಎಆರ್ ಫ್ಯೂಸಿಕ್ಯಾಂಟ್ ನಿಂದ ಕಂದು ಉಪಚಾರ, ಕಂದು ವಿಂಗಡಣೆ, ಸಗಣಿ ಗೊಬ್ಬರದ ಬಳಕೆ, ತರಗುಮಾರು ರೋಗ ನಿರ್ವಹಣೆಯಲ್ಲಿ ಉತ್ತಮ ಪಾತ್ರ ವಹಿಸುತ್ತದೆ ಎಂದರು.

ರೈತರಾದ ನಾಗರಾಜು, ಕೃಷ್ಣಪ್ಪ ಮಾತನಾಡಿದರು. ಕೊಡಸೋಗೆ ಮತ್ತು ಸುತ್ತಮುತ್ತಲಿನ ಗ್ರಾಮದ 46 ಗ್ರಾಮಸ್ಥರು ಭಾಗವಹಿಸಿದ್ದರು.